June 26, 2026
Friday, June 26, 2026
spot_img

53 ಲಕ್ಷ ಟನ್‌ಗೂ ಅಧಿಕ ಆಹಾರ ಧಾನ್ಯಗಳ ಸಮರ್ಪಕ ನಿರ್ವಹಣೆ: ಎಫ್‌ಸಿಐ ಕಾರ್ಯಕ್ಕೆ ಈರಣ್ಣ ಕಡಾಡಿ ಮೆಚ್ಚುಗೆ

ಹೊಸದಿಗಂತ ವರದಿ ಬೆಳಗಾವಿ‌:

ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ತರಲಾದ 54.54 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ಸುರಕ್ಷಿತ ಸಾಗಣೆ, ಶೂನ್ಯ ಹಾನಿ ಸಾಧನೆ ಹಾಗೂ ಅತ್ಯಂತ ಕಡಿಮೆ ಸಂಗ್ರಹಣಾ ಮತ್ತು ಸಾಗಾಣಿಕೆ ನಷ್ಟ ದಾಖಲಿಸಿರುವ ಹಿನ್ನೆಲೆಯಲ್ಲಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಕರ್ನಾಟಕ ಪ್ರದೇಶದ ಕಾರ್ಯನಿರ್ವಹಣೆಗೆ ರಾಜ್ಯ ಮಟ್ಟದ ಸಲಹಾ ಸಮಿತಿ (ಎಸ್‌ಎಲ್‌ಸಿ) ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಎಫ್‌ಸಿಐ ಕರ್ನಾಟಕ ಪ್ರದೇಶದ 2025-26ನೇ ಸಾಲಿನ ಕಾರ್ಯಚಟುವಟಿಕೆಗಳ ಪರಿಶೀಲನೆ ನಡೆಸಲಾಗಿದೆ. ಆಹಾರ ಧಾನ್ಯಗಳ ಸಂಗ್ರಹಣೆ, ಸಾಗಣೆ ಹಾಗೂ ಗುಣಮಟ್ಟ ನಿರ್ವಹಣೆಯಲ್ಲಿ ಕರ್ನಾಟಕ ಪ್ರದೇಶವು ಕೇಂದ್ರ ಕಚೇರಿ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ನಿಗದಿತ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸಿದೆ ಎಂದು ಹೇಳಿದರು.

ಕಳೆದ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (PMGKAY), ಪಿಎಂ ಪೋಷಣ್, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS), ವಿದ್ಯಾರ್ಥಿ ವಸತಿ ನಿಲಯಗಳು ಸೇರಿದಂತೆ ವಿವಿಧ ಯೋಜನೆಗಳಡಿ ರಾಜ್ಯದಲ್ಲಿ 52,90,737 ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ರಾಜ್ಯದ ಅಗತ್ಯತೆಗಳನ್ನು ಪೂರೈಸಲು ಹೆಚ್ಚುವರಿ ಉತ್ಪಾದನಾ ರಾಜ್ಯಗಳಿಂದ 54,53 ಮೆಟ್ರಿಕ್ ಟನ್ ಅಕ್ಕಿ ಮತ್ತು ಗೋಧಿಯನ್ನು ರೈಲ್ವೆ ಮೂಲಕ ಕರ್ನಾಟಕಕ್ಕೆ ತರಿಸಿ ಯಶಸ್ವಿಯಾಗಿ ಎಂದರು.‌

ರಾಜ್ಯದಲ್ಲಿ ಎಫ್‌ಸಿಐ 61 ಗೋದಾಮುಗಳ ಮೂಲಕ 10.68 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ 2.45 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಹೆಚ್ಚುವರಿ ಗೋದಾಮುಗಳ ನಿರ್ಮಾಣ ಪ್ರಗತಿಯಲ್ಲಿದೆ.‌ ಕಳೆದ ಐದು ವರ್ಷಗಳಿಂದ ಬೃಹತ್ ಪ್ರಮಾಣದ ಆಹಾರ ಧಾನ್ಯಗಳನ್ನು ನಿರ್ವಹಿಸುತ್ತಿದ್ದರೂ ಗುಣಮಟ್ಟದಲ್ಲಿ ಯಾವುದೇ ಹಾನಿ ಅಥವಾ ಕೊರತೆ ದಾಖಲಾಗಿಲ್ಲ. ಸಂಗ್ರಹಣೆ ಹಾಗೂ ಸಾಗಾಣಿಕೆ ಹಂತಗಳಲ್ಲಿ ನಷ್ಟವನ್ನು ಕನಿಷ್ಠ ಮಟ್ಟಕ್ಕೆ ಇಳಿಸಿರುವುದು ಕರ್ನಾಟಕ ಪ್ರದೇಶದ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು‌ ತಿಳಿಸಿದರು.‌

ಆಹಾರ ಧಾನ್ಯಗಳ ಸುರಕ್ಷಿತ ನಿರ್ವಹಣೆ, ವೈಜ್ಞಾನಿಕ ಸಂಗ್ರಹಣೆ ಹಾಗೂ ಗುಣಮಟ್ಟದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಿಂದ ರಾಜ್ಯದ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ನಿರಂತರ ಮತ್ತು ವಿಶ್ವಾಸಾರ್ಹ ಪೂರೈಕೆ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಎಫ್‌ಸಿಐ ಕರ್ನಾಟಕ ಪ್ರದೇಶದ ಕಾರ್ಯವೈಖರಿ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !