September 27, 2026
Sunday, September 27, 2026
spot_img

ಭಾರತ-ಸೀಶೆಲ್ಸ್ ದ್ವಿಪಕ್ಷೀಯ ಬಾಂಧವ್ಯಕ್ಕೆ 50 ವರುಷ: ಸೀಶೆಲ್ಸ್ ರಾಷ್ಟ್ರೀಯ ದಿನಾಚರಣೆಗೆ ‘ನಮೋ’ ಮುಖ್ಯ ಅತಿಥಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 27 ರಿಂದ 29 ರವರೆಗೆ ಸೀಶೆಲ್ಸ್ ದೇಶಕ್ಕೆ ಮಹತ್ವದ 3 ದಿನಗಳ ಅಧಿಕೃತ ಪ್ರವಾಸ ಕೈಗೊಂಡಿದ್ದಾರೆ. ಭಾರತ ಹಾಗೂ ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಬಾಂಧವ್ಯದ 50ನೇ ವಾರ್ಷಿಕೋತ್ಸವ ಮತ್ತು ಸೀಶೆಲ್ಸ್ ರಾಷ್ಟ್ರೀಯ ದಿನಾಚರಣೆಯ ಸುವರ್ಣ ಮಹೋತ್ಸವದ ಅಂಗವಾಗಿ, ಪ್ರಧಾನಿ ಮೋದಿ ಅವರನ್ನು ಮುಖ್ಯ ಅತಿಥಿಯಾಗಿ ಗೌರವಪೂರ್ವಕವಾಗಿ ಆಹ್ವಾನಿಸಲಾಗಿದೆ.

ವಿಶ್ವದ ಅತ್ಯಂತ ಹಳೆಯ ಆಮೆ ‘ಜೊನಾಥನ್’ ಭೇಟಿ

ಈ ಪ್ರವಾಸದ ಪ್ರಮುಖ ಹಾಗೂ ವಿಶಿಷ್ಟ ಆಕರ್ಷಣೆಯೆಂದರೆ, ಸೀಶೆಲ್ಸ್ ರಾಷ್ಟ್ರೀಯ ಸಸ್ಯೋದ್ಯಾನದಲ್ಲಿರುವ ವಿಶ್ವದ ಅತ್ಯಂತ ಹಳೆಯ ಜೀವಂತ ಭೂಮಂಡಲ ಪ್ರಾಣಿ ‘ಜೊನಾಥನ್’ ಆಮೆಯನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಸುಮಾರು 1832ರಲ್ಲಿ ಜನಿಸಿದ ಈ ಅಲ್ಡಾಬ್ರಾ ದೈತ್ಯ ಆಮೆ, ಬ್ರಿಟನ್‌ನ ರಾಣಿ ವಿಕ್ಟೋರಿಯಾ ಅಧಿಕಾರಕ್ಕೆ ಬರುವ ಮುನ್ನವೇ ಜನ್ಮತಾಳಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದೆ. 250 ಕೆಜಿಗಿಂತಲೂ ಹೆಚ್ಚು ತೂಕವಿರುವ ಈ ಆಮೆಗೆ ಈಗ 194 ವರ್ಷಗಳು.

ರಕ್ಷಣಾ ಸಹಕಾರ ಮತ್ತು ಬ್ಲೂ ಎಕಾನಮಿ ಚರ್ಚೆ

ಸೀಶೆಲ್ಸ್ ಸ್ವಾತಂತ್ರ್ಯದ 50ನೇ ವರ್ಷದ ಸಂಭ್ರಮದ ಮೆರವಣಿಗೆಯಲ್ಲಿ ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ರಕ್ಷಣಾ ಸಿಬ್ಬಂದಿಯ ತುಕಡಿಯೂ ಭಾಗವಹಿಸಲಿದೆ. ಈ ಭೇಟಿಯ ವೇಳೆ ಸೀಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನಿ ಅವರೊಂದಿಗೆ ಪ್ರಧಾನಿ ಮೋದಿ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಭದ್ರತೆ ಹೆಚ್ಚಿಸುವುದು, ನೀಲಿ ಆರ್ಥಿಕತೆ (Blue Economy) ಅಭಿವೃದ್ಧಿ, ರಕ್ಷಣಾ ಸಹಕಾರ ಹಾಗೂ ಹವಾಮಾನ ಬದಲಾವಣೆ ತಡೆಗೆ ಜಂಟಿ ಕಾರ್ಯತಂತ್ರ ರೂಪಿಸುವ ಕುರಿತು ಉಭಯ ನಾಯಕರು ಮಹತ್ವದ ಚರ್ಚೆ ನಡೆಸಲಿದ್ದಾರೆ. ಇದರೊಂದಿಗೆ ಸೀಶೆಲ್ಸ್ ಸಂಸತ್ತನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.

Must Read