ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕಳೆದ ವರ್ಷ ನಡೆದ ಕರೂರ್ ಕಾಲ್ತುಳಿತ ದುರಂತದಲ್ಲಿ ಪ್ರಾಣ ಕಳೆದುಕೊಂಡ 41 ಜನರಿಗೆ ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ರಾಜಕೀಯ ಜೀವನ ಹಾಗೂ ಇಡೀ ತಮಿಳುನಾಡಿನ ಇತಿಹಾಸದಲ್ಲಿ ಇದೊಂದು ಅತ್ಯಂತ ದುಃಖದಾಯಕ ದಿನ ಎಂದು ಅವರು ಕಂಬನಿ ಮಿಡಿದಿದ್ದಾರೆ.
‘ಮರೆಯಲಾಗದ ನೋವಿದು’-ಸಿಎಂ
ಕರೂರ್ ದುರಂತ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ವಿಜಯ್, ʼಕರೂರ್ ತಮಿಳುನಾಡಿನ ನನ್ನ ಆತ್ಮೀಯರೇ… ಕಳೆದ ವರ್ಷ ಇದೇ ದಿನ ಎಂದಿಗೂ ಆರದ ಗಾಯ, ಮರೆಯಲಾಗದ ನೋವೊಂದು ಉಂಟಾಯಿತು. ಕಳೆದುಕೊಂಡ ಜೀವಗಳ ನೆನಪಿನಲ್ಲಿ ನಾವೆಲ್ಲರೂ ಪರಸ್ಪರ ಬೆಂಬಲವಾಗಿ ನಿಲ್ಲೋಣ. ನಮ್ಮ ನೆನಪುಗಳಲ್ಲಿ ಎಂದಿಗೂ ಜೀವಂತವಾಗಿರುವ ಎಲ್ಲಾ ಆತ್ಮೀಯ ಬಂಧುಗಳಿಗೆ ನನ್ನ ಹೃದಯಪೂರ್ವಕ ಶ್ರದ್ಧಾಂಜಲಿʼ ಎಂದು ಬರೆದುಕೊಂಡಿದ್ದಾರೆ.
ಏನಿದು ಕರೂರ್ ಕಾಲ್ತುಳಿತ ದುರಂತ?
ಸೆಪ್ಟೆಂಬರ್ 27, 2025 ರಂದು ಕರೂರ್ ಜಿಲ್ಲೆಯಲ್ಲಿ ನಟ ವಿಜಯ್ ಅವರ ಪಕ್ಷದ ಬೃಹತ್ ರಾಜಕೀಯ ಸಮಾವೇಶವನ್ನು ಆಯೋಜಿಸಲಾಗಿತ್ತು.ಈ ವೇಳೆ ಜನದಟ್ಟಣೆ ಮಿತಿಮೀರಿ ಉಂಟಾದ ಭೀಕರ ಕಾಲ್ತುಳಿತದಲ್ಲಿ 41 ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ತೀವ್ರವಾಗಿ ಗಾಯಗೊಂಡಿದ್ದರು. ಇದು ತಮಿಳುನಾಡಿನ ಇತ್ತೀಚಿನ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕರಾಳ ದುರಂತ ಎಂದು ಪರಿಗಣಿಸಲಾಗಿದೆ.
ಸಂತ್ರಸ್ತರ ಕುಟುಂಬಗಳಿಗೆ ಸುಪ್ರೀಂ ಕೋರ್ಟ್‌ನಿಂದ ನೆರವು
ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಲು ತಮಿಳುನಾಡು ಸರ್ಕಾರ ನಿರ್ಧರಿಸಿತ್ತು. ಆದರೆ, ಮದ್ರಾಸ್ ಹೈಕೋರ್ಟ್ ಈ ನಿರ್ಧಾರವನ್ನು ರದ್ದುಗೊಳಿಸಿತ್ತು. ಇತ್ತೀಚೆಗೆ ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ:
ದುರಂತದಲ್ಲಿ ಕುಟುಂಬದ ಏಕೈಕ ಆಧಾರ ಸ್ತಂಭವನ್ನೇ ಕಳೆದುಕೊಂಡಿರುವ ಸಂತ್ರಸ್ತರಿಗೆ ಉದ್ಯೋಗ ನೀಡಿ ಪುನರ್ವಸತಿ ಕಲ್ಪಿಸುವುದನ್ನು ನ್ಯಾಯಾಲಯ ಏಕೆ ತಡೆಯಬೇಕು? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಈ ಮೂಲಕ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರಕ್ಕೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಮಟ್ಟದ ಕಾನೂನು ಗೆಲುವು ಸಿಕ್ಕಂತಾಗಿದೆ. ಈಗಾಗಲೇ ಸಂತ್ರಸ್ತರ 32 ವಾರಸುದಾರರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸದ ಆದೇಶ ಪತ್ರಗಳನ್ನು ವಿತರಿಸಲಾಗಿದೆ.



