June 27, 2026
Saturday, June 27, 2026
spot_img

ಟ್ರಂಪ್ ಭಾರತ ಭೇಟಿಗೆ ಮುಹೂರ್ತ ಫಿಕ್ಸ್? ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಿದ್ದು, ಮುಂದಿನ ವರ್ಷದ (2026) ಆರಂಭದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಹತ್ವದ ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿ-ಟ್ರಂಪ್ ಸ್ನೇಹಕ್ಕೆ ಸಾಕ್ಷಿ

ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮಾರ್ಕೊ ರುಬಿಯೊ, “ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಅತ್ಯಂತ ಆಪ್ತವಾದ ಸ್ನೇಹವಿದೆ. ಇದೇ ಕಾರಣಕ್ಕೆ ಮುಂದಿನ ವರ್ಷದ ಆರಂಭದಲ್ಲೇ ಟ್ರಂಪ್ ಅವರ ಭಾರತ ಪ್ರವಾಸವನ್ನು ಆಯೋಜಿಸುತ್ತಿದ್ದೇವೆ,” ಎಂದಿದ್ದಾರೆ. ಈ ಭೇಟಿಯ ಪೂರ್ವಸಿದ್ಧತೆಗಾಗಿ ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ತಾವು ಕೂಡ ಭಾರತಕ್ಕೆ ಭೇಟಿ ನೀಡುವುದಾಗಿ ರುಬಿಯೊ ತಿಳಿಸಿದ್ದಾರೆ.

2020ರ ಬಳಿಕ ಮೊದಲ ಪ್ರವಾಸ

ಭಾರತವನ್ನು ಅಮೆರಿಕದ ಅತ್ಯಂತ ನಿಕಟ ಪಾಲುದಾರ ಮತ್ತು ಮಿತ್ರ ರಾಷ್ಟ್ರ ಎಂದು ರುಬಿಯೊ ಬಣ್ಣಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಬಂದರೆ, ಇದು 2020ರ ಫೆಬ್ರವರಿ (ನಮಸ್ತೆ ಟ್ರಂಪ್ ಕಾರ್ಯಕ್ರಮ) ನಂತರ ಅವರ ಮೊದಲ ಪ್ರವಾಸವಾಗಲಿದೆ. ಅಲ್ಲದೆ, ಎರಡನೇ ಅವಧಿಗೆ ಅಧ್ಯಕ್ಷರಾದ ಬಳಿಕ ಅವರು ನೀಡುತ್ತಿರುವ ಮೊದಲ ಭಾರತ ಭೇಟಿ ಇದಾಗಲಿದೆ. ಇತ್ತೀಚೆಗಷ್ಟೇ ಫ್ರಾನ್ಸ್‌ನಲ್ಲಿ ನಡೆದಿದ್ದ ಜಿ-7 (G-7) ಶೃಂಗಸಭೆಯಲ್ಲಿ ಮೋದಿ ಮತ್ತು ಟ್ರಂಪ್ ಮುಖಾಮುಖಿಯಾಗಿ ಚರ್ಚಿಸಿದ್ದರು.

ಅಂತಿಮ ಹಂತದಲ್ಲಿ ವ್ಯಾಪಾರ ಒಪ್ಪಂದ

ಟ್ರಂಪ್ ಭೇಟಿಯ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಆರ್ಥಿಕ ಬಾಂಧವ್ಯವೂ ವೃದ್ಧಿಯಾಗಲಿದೆ. ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳು ಸದ್ಯ ಅಂತಿಮ ಹಂತಕ್ಕೆ ತಲುಪಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ತಿಳಿಸಿದ್ದಾರೆ. ಈ ಭೇಟಿಯು ಉಭಯ ದೇಶಗಳ ರಕ್ಷಣೆ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ನೀಡುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !