ಹೊಸದಿಗಂತ ವರದಿ ಬೀದರ್:
ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ವಂಚನೆ, ಪರೀಕ್ಷೆಗಳ ರದ್ದು ಹಾಗೂ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸ ಕುಸಿತದ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೇಶಾದ್ಯಂತ ‘ಛಾತ್ರೋಂ ಕಿ ಗೂಂಜ್’ (ವಿದ್ಯಾರ್ಥಿಗಳ ಗರ್ಜನೆ) ಅಭಿಯಾನಕ್ಕೆ ಚಾಲನೆ ನೀಡಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭಚನದಲ್ಲಿ ಶನಿವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, 28 ಪ್ರಮುಖ ನಗರಗಳಲ್ಲಿ 40 ದಿನಗಳ ಕಾಲ ನಡೆಯಲಿರುವ ಈ ಅಭಿಯಾನವು ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುವ ಉದ್ದೇಶ ಹೊಂದಿದೆ ಎಂದರು.
ಕಾಂಗ್ರೆಸ್ ಪಕ್ಷದ ಪ್ರಕಾರ, ಕೋಚಿಂಗ್ ಕೇಂದ್ರಗಳು, ಕಾಲೇಜು ಕ್ಯಾಂಪಸ್‌ಗಳು, ಹಾಸ್ಟೆಲ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ ಅವರ ಧ್ವನಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು. “ಪ್ರಾಮಾಣಿಕವಾಗಿ ಓದುವ ಪ್ರತಿಯೊಬ್ಬ ವಿದ್ಯಾರ್ಥಿಗೂ ನ್ಯಾಯಯುತ ಪರಿಕ್ಷೆಯ ಅವಕಾಶ ಸಿಗಬೇಕು” ಎಂಬುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ನೀಟ್ ಯುಜಿ-2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಉಲ್ಲೇಖಿಸಿದ ಅವರು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಹಾನಿಗೊಳಗಾಗಿದೆ ಎಂದು ಆರೋಪಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಯುತ್ತಿದ್ದು, ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಕಳೆದ ಹಲವು ವರ್ಷಗಳಲ್ಲಿ ಕೋಟ್ಯಂತರ ವಿದ್ಯಾರ್ಥಿಗಳು ಇದರ ಪರಿಣಾಮ ಅನುಭವಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:
ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಶಿಕ್ಷಣ ಕ್ಷೇತ್ರದ ಸಮಸ್ಯೆಯಲ್ಲ; ಇದು ಯುವಜನರ ಭವಿಷ್ಯ ಮತ್ತು ಉದ್ಯೋಗದ ಪ್ರಶ್ನೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು, ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಬೇಕು ಎಂದು ಆಗ್ರಹಿಸಿದರು.
ಅದರ. ಜೊತೆಗೆ, ವಾರ್ಷಿಕ ಪರೀಕ್ಷೆಗಳು ಮತ್ತು ನೇಮಕಾತಿಗಳಿಗಾಗಿ ನಿಗದಿತ ಕ್ಯಾಲೆಂಡರ್ ಜಾರಿಗೆ ತಂದು ದಿನಾಂಕಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಒತ್ತಾಯಿಸಿದರು.
ಅಭಿಯಾನದ ಅಂಗವಾಗಿ ಜೂನ್ 30ರಿಂದ ದೇಶದ 28 ನಗರಗಳಲ್ಲಿ ಕರಪತ್ರ ವಿತರಣೆ, ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮಗಳು ಹಾಗೂ ಬೀದಿ ಸಭೆಗಳು ನಡೆಯಲಿವೆ. ಜುಲೈ ತಿಂಗಳಿಡೀ ಕ್ಯಾಂಪಸ್ ಸಂಪರ್ಕ ಅಭಿಯಾನ ಮತ್ತು ವಿವಿಧ ವಿದ್ಯಾರ್ಥಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆಗಸ್ಟ್ 1ರಂದು ಜಿಲ್ಲಾಧಿಕಾರಿಗಳ ಕಚೇರಿಗಳ ಮುತ್ತಿಗೆ ಹಾಗೂ ಆಗಸ್ಟ್ 9ರಂದು ದೆಹಲಿಯಲ್ಲಿ ಸಂಸತ್ ಮುತ್ತಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
“ವಿದ್ಯಾರ್ಥಿಗಳು ಯಾವುದೇ ವಿಶೇಷ ಸೌಲಭ್ಯ ಕೇಳುತ್ತಿಲ್ಲ; ನ್ಯಾಯಯುತ ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಯನ್ನು ಮಾತ್ರ ಬೇಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಕದಿಯುವ ಪ್ರಶ್ನೆ ಪತ್ರಿಕೆ ಸೋರಿಕೆಗಳನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ” ಎಂದು ಜಾಬಶೆಟ್ಟಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೊಡೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪ್ರೊ ವಿಟಡಲದಾಸ ಪ್ಯಾಗೆ, ಅಬ್ದುಲ್ ಸತ್ತಾರ, ಶಿವನಾಥ ಪಾಟೀಲ್, ಸಚಿನ್ ಮಲ್ಕಾಪುರೆ, ಪಕ್ಷದ ಪ್ರಚಾರ ಸಮಿತಿಯ ಮುಖಂಡರಾದ ಸುನಿಲ ಬಚ್ಚನ್, ಸಂಜು ಡಿ.ಕೆ, ರವಿಂದ್ರ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.



