ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಹಾಗೂ ಹಿಟ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಆಕ್ಷನ್ ಡ್ರಾಮಾ ಸಿನಿಮಾ ಬರುವ ಅಕ್ಟೋಬರ್ 16, 2026 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಆದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರಲ್ಲಿ ಕುತೂಹಲದ ಕಿಚ್ಚು ಹೆಚ್ಚಿಸಲು ಚಿತ್ರತಂಡವೊಂದು ಹೊಸ ಅಲೆಯನ್ನೇ ಸೃಷ್ಟಿಸಿದೆ.
ಚಿತ್ರದ ಹಿನ್ನೆಲೆ ಮತ್ತು ಅದರಲ್ಲಿರುವ ಸತ್ಯ ಘಟನೆಗಳನ್ನು ಅನಾವರಣಗೊಳಿಸಲು ‘ರಣಬಾಲಿ’ ನಿರ್ಮಾಪಕರು 4 ಭಾಗಗಳ ಡಾಕ್ಯು-ಸೀರೀಸ್ ಅನ್ನು ಬಿಡುಗಡೆ ಮಾಡಲು ಸಂಪೂರ್ಣ ಸಜ್ಜಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡಿರುವ ಚಿತ್ರತಂಡ, ಇತಿಹಾಸದ ರಹಸ್ಯಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದೆ. “2 ವರ್ಷಗಳ ಸುದೀರ್ಘ ಸಂಶೋಧನೆ, 150 ವರ್ಷಗಳ ಕಾಲ ಮರೆತುಹೋದ ಸತ್ಯ ಇತಿಹಾಸ. ನಮಗೆ ಇದುವರೆಗೆ ಹೇಳಿದ್ದೆಲ್ಲವೂ ಕೇವಲ ಒಂದು ಬದಿಯ ಕಥೆಯಷ್ಟೇ. ಆದರೆ, ನೈಜವಾಗಿ ನಡೆದ ಘಟನೆಗಳು ಅತ್ಯಂತ ದಾರುಣ ಹಾಗೂ ಭಯಾನಕವಾಗಿದ್ದವು” ಎಂದು ಬರೆದುಕೊಂಡಿದೆ.
ಈ ವಿಶೇಷ ಡಾಕ್ಯು-ಸೀರೀಸ್ನಲ್ಲಿ ನಟ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ರಾಹುಲ್ ಸಂಕೃತ್ಯನ್ ಸ್ವತಃ ಭಾಗವಹಿಸಿ, ಈ ಸಿನಿಮಾದ ಹಿಂದಿರುವ ರಕ್ತಸಿಕ್ತ ಇತಿಹಾಸವನ್ನು ವಿವರಿಸಲಿದ್ದಾರೆ. ಈ ಸರಣಿಯ ಮೊದಲ ಸಂಚಿಕೆಯು ಸೆಪ್ಟೆಂಬರ್ 28, 2026 ರಿಂದ ‘ಮೈತ್ರಿ ಮೂವಿ ಮೇಕರ್ಸ್’ ನ ಅಧಿಕೃತ ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
ಚಿತ್ರಮಂದಿರಕ್ಕೆ ಬರುವ ಮುನ್ನವೇ ಸಿನಿಮಾದ ನೈಜ ಕಥಾಹಂದರವನ್ನು ಈ ರೀತಿ ಡಾಕ್ಯುಮೆಂಂಟರಿ ಮೂಲಕ ತಲುಪಿಸುತ್ತಿರುವುದು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಅಪರೂಪದ ಪ್ರಯೋಗವಾಗಿದ್ದು, ಅಭಿಮಾನಿಗಳಲ್ಲಿ ಮತ್ತು ಸಿನಿಪ್ರಿಯರಲ್ಲಿ ರಣಬಾಲಿ ಮೇಲಿನ ನಿರೀಕ್ಷೆಯನ್ನು ಮುಗಿಲು ಮುಟ್ಟುವಂತೆ ಮಾಡಿದೆ.



