ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮವು ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ವೇದಿಕೆ ಮೇಲಿದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಉಪಸ್ಥಿತಿಗೆ ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕರು ಹಾಗೂ ಒಕ್ಕಲಿಗ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಶಾಸಕರ ಕಾರು ಮತ್ತು ವೇದಿಕೆಯತ್ತ ಚಪ್ಪಲಿ ಎಸೆಯಲಾದ ಘಟನೆಯೂ ನಡೆದಿದೆ.
ಕಾರ್ಯಕ್ರಮದಲ್ಲಿ ಹೈಡ್ರಾಮಾ
ಶಾಸಕ ಪ್ರದೀಪ್ ಈಶ್ವರ್ ವೇದಿಕೆ ಏರುತ್ತಿದ್ದಂತೆ ಕೆರಳಿದ ಜೆಡಿಎಸ್ ಮತ್ತು ಸಮುದಾಯದ ಕಾರ್ಯಕರ್ತರು, “ಪ್ರದೀಪ್ ಈಶ್ವರ್ ವೇದಿಕೆಯಿಂದ ಕೆಳಗಿಳಿಯಬೇಕು, ಗೋ ಬ್ಯಾಕ್” ಎಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು. ವೇದಿಕೆ ಮೇಲಿದ್ದ ಶಾಸಕ ಪ್ರದೀಪ್ ಈಶ್ವರ್ ಪ್ರತಿಭಟನಾಕಾರರಿಗೆ ಸವಾಲು ಹಾಕುವಂತೆ ಮೀಸೆ ತಿರುವಿ, ತೊಡೆ ತಟ್ಟಿದ್ದು ಜನಾಕ್ರೋಶ ಮತ್ತಷ್ಟು ಭಾಡಕಾಗಲು ಕಾರಣವಾಯಿತು. ಶಾಸಕರ ಈ ವರ್ತನೆಯಿಂದ ಆಕ್ರೋಶಗೊಂಡ ಜನಸಮೂಹ ವೇದಿಕೆಯತ್ತ ನುಗ್ಗಲು ಯತ್ನಿಸಿತು.
ತೀವ್ರ ಗದ್ದಲದ ನಡುವೆ ದುಷ್ಕರ್ಮಿಗಳು ಶಾಸಕರನ್ನು ಗುರಿಯಾಗಿಸಿ ಚಪ್ಪಲಿ ಎಸೆದಿದ್ದಾರೆ. ಆದರೆ, ಆ ಚಪ್ಪಲಿ ಸ್ಥಳದಲ್ಲಿದ್ದ ಪೊಲೀಸರ ಮೇಲೆ ಬಿದ್ದಿದೆ ಎಂದು ವರದಿಯಾಗಿದೆ. ನಂತರ ಶಾಸಕರ ಕಾರಿನ ಮೇಲೂ ಚಪ್ಪಲಿ ಎಸೆಯಲಾಗಿದೆ.
ಇದನ್ನೂ ಓದಿ:
ಪೊಲೀಸರಿಂದ ಲಘು ಲಾಠಿ ಪ್ರಹಾರ – ಸ್ವಾಮೀಜಿ ಸಂಧಾನ:
ಕಾರ್ಯಕ್ರಮದಲ್ಲಿ ಉಭಯ ಬಣಗಳ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದಾಗ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸ್ಥಳದಲ್ಲಿದ್ದವರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು. ವೇದಿಕೆಯಲ್ಲಿದ್ದ ಮಂಗಳನಾಥ ಸ್ವಾಮೀಜಿ ಮಧ್ಯಪ್ರವೇಶಿಸಿ ಉಭಯ ಪಕ್ಷಗಳ ಮುಖಂಡರ ನಡುವೆ ಸಂಧಾನ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಘಟನೆಯಿಂದಾಗಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಕೆಲಕಾಲ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಚಿಕ್ಕಬಳ್ಳಾಪುರ ನಗರದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.



