ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್ ಅಂಗಳದಲ್ಲಿ ದಶಕಕ್ಕೂ ಹೆಚ್ಚು ಕಾಲ ತನ್ನದೇ ಛಾಪು ಮೂಡಿಸಿರುವ ನಟಿ ಶರ್ಮಿಳಾ ಮಾಂಡ್ರೆಗೆ ಈಗ ಕಂಕಣ ಭಾಗ್ಯ ಕೂಡಿಬಂದಿದೆ. ತಮಿಳು ಚಿತ್ರರಂಗದ ಯಶಸ್ವಿ ಚಿತ್ರ ನಿರ್ಮಾಪಕ ಸುಧನ್ ಸುಂದರಂ ಜೊತೆಗೆ ಬೆಂಗಳೂರಿನ ಐಷಾರಾಮಿ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಶರ್ಮಿಳಾ ಉಂಗುರ ಬದಲಾಯಿಸಿಕೊಂಡಿದ್ದಾರೆ.
ತಮ್ಮ ನಿಶ್ಚಿತಾರ್ಥದ ಸುಂದ ಸುಂದರ ಕ್ಷಣಗಳ ವಿಶೇಷ ಫೋಟೋಗಳನ್ನು ನಟಿ ಶರ್ಮಿಳಾ ಮಾಂಡ್ರೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಐವರಿ ಥೀಮ್‌ನಲ್ಲಿ ಮಿಂಚಿದ ಜೋಡಿ
ಬೆಂಗಳೂರಿನಲ್ಲಿ ನಡೆದ ಈ ಅದ್ಧೂರಿ ಎಂಗೇಜ್‌ಮೆಂಟ್ ಕಾರ್ಯಕ್ರಮವು ಕೇವಲ ಕುಟುಂಬಸ್ಥರು ಹಾಗೂ ಅತ್ಯಾಪ್ತ ಸ್ನೇಹಿತರ ಸಮ್ಮುಖದಲ್ಲಿ ಅತ್ಯಂತ ಆಪ್ತವಾಗಿ ನೆರವೇರಿದೆ. ನಿಶ್ಚಿತಾರ್ಥದ ವಿಶೇಷ ಪೂಜೆಯೊಂದಿಗೆ ಆರಂಭವಾದ ಈ ಸಮಾರಂಭದಲ್ಲಿ ಪ್ರೇಮಿಗಳಿಬ್ಬರು ಸಾಂಪ್ರದಾಯಿಕ ‘ಐವರಿ’ ಬಣ್ಣದ ಉಡುಪುಗಳನ್ನು ಧರಿಸಿ ಕಣ್ಮನ ಸೆಳೆದಿದ್ದಾರೆ. ಯಾವುದೇ ಮಾಧ್ಯಮಗಳ ಪ್ರವೇಶವಿಲ್ಲದೆ ನೆರವೇರಿದ ಈ ಸಮಾರಂಭದ ಫೋಟೋಗಳು ಹೊರಬೀಳುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಶರ್ಮಿಳಾ ಕೈಹಿಡಿದ ವರ ಸುಧನ್ ಸುಂದರಂ ಯಾರು?
ನಟಿ ಶರ್ಮಿಳಾ ಮಾಂಡ್ರೆಯ ಕೈಹಿಡಿಯಲಿರುವ ವರ ಸುಧನ್ ಸುಂದರಂ ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ‘ಪ್ಯಾಷನ್ ಸ್ಟುಡಿಯೋಸ್’ ಸಂಸ್ಥೆಯ ಮಾಲೀಕರಾಗಿರುವ ಇವರು, ಇತ್ತೀಚೆಗಷ್ಟೇ ತೆರೆಕಂಡು ದೇಶಾದ್ಯಂತ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ ನಟ ವಿಜಯ್ ಸೇತುಪತಿ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ‘ಮಹಾರಾಜ’ ಚಿತ್ರಕ್ಕೆ ಬಂಡವಾಳ ಹೂಡಿದ ಹೆಗ್ಗಳಿಕೆ ಹೊಂದಿದ್ದಾರೆ.
ಇದನ್ನೂ ಓದಿ:
ಸಜ್ಜಾಗಿದೆ ‘ಡೆಸ್ಟಿನೇಷನ್ ವೆಡ್ಡಿಂಗ್’ ಪ್ಲಾನ್!
2007ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಕೃಷ್ಣ’ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ನವಗ್ರಹ’ ಚಿತ್ರಗಳ ಮೂಲಕ ಸ್ಟಾರ್ ಇಮೇಜ್ ಪಡೆದ ಶರ್ಮಿಳಾ ಮಾಂಡ್ರೆ, ನಟನೆಯ ಜತೆಗೆ ಸ್ವತಃ ಚಿತ್ರ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ನಿಶ್ಚಿತಾರ್ಥದ ಸಂಭ್ರಮದಲ್ಲಿರುವ ಈ ಜೋಡಿಯು ಈ ವರ್ಷದ ಕೊನೆಯಲ್ಲಿ ಅತ್ಯಂತ ಅದ್ಧೂರಿಯಾಗಿ ‘ಡೆಸ್ಟಿನೇಷನ್ ವೆಡ್ಡಿಂಗ್’ ಮೂಲಕ ಸಪ್ತಪದಿ ತುಳಿಯಲು ಸಿದ್ಧತೆ ನಡೆಸುತ್ತಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.



