June 28, 2026
Sunday, June 28, 2026
spot_img

‘ಈಠಾ’ ಅಲ್ಲ ಅದು ‘ವಿಠಾಬಾಯಿ’! ಶ್ರದ್ಧಾ ಕಪೂರ್ ಚಿತ್ರದ ವಿರುದ್ಧ ತಿರುಗಿಬಿದ್ದ ಎನ್‌ಸಿಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟನೆಯ ಬಹುನಿರೀಕ್ಷಿತ ‘ಈಠಾ’ (Eetha) ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸಿನಿಮಾ ದೊಡ್ಡ ವಿವಾದದ ಸುಳಿಗೆ ಸಿಲುಕಿದೆ. ಮಹಾರಾಷ್ಟ್ರದ ಹೆಸರಾಂತ ಲಾವಣಿ ನೃತ್ಯಗಾರ್ತಿ ಹಾಗೂ ತಮಾಷಾ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಈ ಚಿತ್ರದ ಶೀರ್ಷಿಕೆಗೆ ಈಗ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಟೈಟಲ್ ಬದಲಾಯಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಎನ್‌ಸಿಪಿ (NCP) ಮತ್ತು ಕುಟುಂಬಸ್ಥರ ಆಕ್ರೋಶ

ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಸಿನಿಮಾ ಮತ್ತು ಸಾಂಸ್ಕೃತಿಕ ವಿಭಾಗವು ಈ ಶೀರ್ಷಿಕೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ಚಿತ್ರಕ್ಕೆ ‘ಈಠಾ’ ಎಂದು ಹೆಸರಿಟ್ಟಿರುವುದು ವಿಠಾಬಾಯಿ ಅವರ ಪರಂಪರೆಗೆ ಮಾಡುವ ಅವಮಾನ ಎಂದು ವಾದಿಸಿರುವ ಎನ್‌ಸಿಪಿ, ಚಿತ್ರಕ್ಕೆ ‘ವಿಠಾ’ ಅಥವಾ ‘ವಿಠಾಬಾಯಿ’ ಎಂದು ಮರುನಾಮಕರಣ ಮಾಡಬೇಕೆಂದು ಆಗ್ರಹಿಸಿದೆ.

ವಿಠಾಬಾಯಿ ಅವರ ಪುತ್ರರಾದ ಕೈಲಾಶ್ ನಾರಾಯಣಗಾಂವ್ಕರ್, ರಾಜೇಶ್ ಹಾಗೂ ಮೊಮ್ಮಗ ಮೋಹಿತ್ ನಾರಾಯಣಗಾಂವ್ಕರ್ ಸೇರಿದಂತೆ ಇಡೀ ಕುಟುಂಬಸ್ಥರು ಎನ್‌ಸಿಪಿಯ ಈ ಬೇಡಿಕೆಯನ್ನು ಬೆಂಬಲಿಸಿ, ಶೀರ್ಷಿಕೆ ಬದಲಾವಣೆಗಾಗಿ ಒತ್ತಾಯಿಸಿದ್ದಾರೆ.

ಚಿತ್ರತಂಡದ ಮೌನ

ಎನ್‌ಸಿಪಿ ಸಾಂಸ್ಕೃತಿಕ ವಿಭಾಗದ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ಬಾಬಾಸಾಹೇಬ್ ಪಾಟೀಲ್ ಮಾತನಾಡಿ, “ವಿಠಾಬಾಯಿ ಅವರ ಜೀವನವನ್ನು ಅತ್ಯಂತ ಗೌರವಯುತವಾಗಿ ತೆರೆಯ ಮೇಲೆ ತರುವುದು ನಮ್ಮ ಜವಾಬ್ದಾರಿ” ಎಂದಿದ್ದಾರೆ. ಆದರೆ, ಈ ವಿವಾದದ ಕುರಿತು ಚಿತ್ರದ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಆಗಲಿ ಅಥವಾ ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಾಗಲಿ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಮುಂಬರುವ ದಿನಗಳಲ್ಲಿ ಚಿತ್ರತಂಡ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !