ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ‘ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ’ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 31ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ‘ನಶಾ ಮುಕ್ತ ಭಾರತ ಅಭಿಯಾನ’ದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಾನ್ ಮಸಾಲಾ ಮತ್ತು ಗುಟ್ಕಾ ತಯಾರಕರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಅಮಲು ಪದಾರ್ಥ ಮಿಶ್ರಣಕ್ಕೆ ಬ್ರೇಕ್
ಕೆಲವು ಪಾನ್ ಮಸಾಲಾ, ಗುಟ್ಕಾ ಹಾಗೂ ಅಡಿಕೆ ಪದಾರ್ಥಗಳಲ್ಲಿ ಗ್ರಾಹಕರನ್ನು ಸೆಳೆಯಲು ಅಪಾಯಕಾರಿ ಅಮಲು ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ದಂಧೆ ತಕ್ಷಣವೇ ನಿಲ್ಲದಿದ್ದರೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ರಾಜ್ಯಾದ್ಯಂತ ಎಲ್ಲಾ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಾಗುತ್ತದೆ ಎಂದು ಸಿಎಂ ಕಠಿಣ ಎಚ್ಚರಿಕೆ ನೀಡಿದ್ದಾರೆ.
ವ್ಯಸನಮುಕ್ತ ಕರ್ನಾಟಕಕ್ಕೆ ಕರೆ
“ಮಾದಕದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವುದೇ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದ್ದು, ಇದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಡಿಕೆಶಿ ತಿಳಿಸಿದರು. ವ್ಯಸನಮುಕ್ತ ಮತ್ತು ಸುಂದರ ಸಮಾಜದ ಕನಸನ್ನು ನನಸು ಮಾಡಲು ಶಿಕ್ಷಣ ಸಂಸ್ಥೆಗಳು, ಪೋಷಕರು ಹಾಗೂ ಪ್ರತಿಯೊಬ್ಬ ನಾಗರಿಕರು ಒಟ್ಟಾಗಿ ಕೈಜೋಡಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.



