ಹೊಸದಿಗಂತ ವರದಿ ಬೆಳಗಾವಿ:
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಅಶ್ವಾರೂಢ ಪ್ರತಿಮೆಯ ಖಡ್ಗ ಹಿಡಿದ ಬಲಗೈ ಮುರಿದು ಬಿದ್ದಿದ್ದು, ಪ್ರತಿಮೆಗೆ ಹಾನಿಯಾಗಿದೆ.
ಕಿತ್ತೂರು ಉತ್ಸವದ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಐತಿಹಾಸಿಕ ಮಹತ್ವ ಹೊಂದಿರುವ ರಾಣಿ ಚನ್ನಮ್ಮಾಜಿಯ ಪ್ರತಿಮೆಗೆ ಹಾನಿಯಾಗಿರುವುದು ಸಾರ್ವಜನಿಕರಲ್ಲಿ ವಿಷಾದ ಮೂಡಿಸಿದೆ.
ಸುಮಾರು 25 ವರ್ಷಗಳ ಹಿಂದೆ ಸ್ಥಾಪಿಸಲಾಗಿರುವ ಈ ಪ್ರತಿಮೆ ನಿರಂತರ ಬಿಸಿಲು ಹಾಗೂ ಮಳೆಯಿಂದ ದುರ್ಬಲಗೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಪ್ರತಿಮೆಯ ಕೈ ಮುರಿದು ಬೀಳಲು ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಇದನ್ನೂ ಓದಿ:
ಈ ಕುರಿತು ತಹಸೀಲ್ದಾರ್ ಕಲ್ಲಗೌಡ ಪಾಟೀಲ ಮಾತನಾಡಿ, “ಆಕಸ್ಮಿಕವಾಗಿ ಚನ್ನಮ್ಮಾಜಿಯ ಪ್ರತಿಮೆಯ ಕೈ ಮುರಿದು ಬಿದ್ದಿದೆ. ಕಿತ್ತೂರು ಉತ್ಸವದ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ವಿಷಾದನೀಯ. ಉತ್ಸವದೊಳಗಾಗಿ ಪ್ರತಿಮೆಯನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಘಟನೆಯ ಕುರಿತು ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ,” ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಸಿದ್ದರಾಮ ಮಾರಿಹಾಳ, ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಭರತ್ ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ತುಬಾಕಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.



