October 17, 2026
Saturday, October 17, 2026
spot_img

ರೈತನಿಂದ ಹಣ ಕೇಳಿದ ಆರೋಪ: TVK ಮುಖಂಡನಿಗೆ ಪಕ್ಷದಿಂದ ಗೇಟ್ ಪಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈತನೊಬ್ಬರಿಂದ ಪಕ್ಷದ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ತನ್ನ ಜಿಲ್ಲಾ ಜಂಟಿ ಕಾರ್ಯದರ್ಶಿಯನ್ನು ಪಕ್ಷದ ಮೂಲ ಸದಸ್ಯತ್ವದಿಂದ ವಜಾಗೊಳಿಸಿದೆ. ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾದ ಬಳಿಕ ಪಕ್ಷ ಈ ಕ್ರಮ ಕೈಗೊಂಡಿದೆ.

ರೈತನಿಗೆ ಹಣದ ಒತ್ತಡ ಆರೋಪ

ಕಡಲೂರು ಜಿಲ್ಲೆಯ ರೈತನೊಬ್ಬ ಕಂದಾಯ ಇಲಾಖೆಯ ಅನುಮತಿ ಪಡೆದು ಮಣ್ಣು ಸಾಗಣೆ ಮಾಡುತ್ತಿದ್ದ ವೇಳೆ, ಪಕ್ಷದ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ನೀಡುವಂತೆ ಸ್ಥಳೀಯ TVK ಮುಖಂಡ ಪುಲವೇಂದ್ರನ್ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಹಣ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ:

ಆಕ್ರೋಶಗೊಂಡ ಗ್ರಾಮಸ್ಥರು

ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಪುಲವೇಂದ್ರನ್ ಸಂಚರಿಸುತ್ತಿದ್ದ ಕಾರನ್ನು ತಡೆದು ಪ್ರತಿಭಟನೆ ನಡೆಸಿದರು. ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾರಿನ ಗಾಜು ಸಹ ಹಾನಿಗೊಳಗಾಯಿತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಯಿತು. ಇದೇ ವೇಳೆ ಪಕ್ಷದ ನಾಯಕರಿಗೂ ಅಧಿಕೃತ ದೂರು ಸಲ್ಲಿಕೆಯಾಗಿತ್ತು.

ಪಕ್ಷದಿಂದ ಕಠಿಣ ನಿರ್ಧಾರ

ದೂರುಗಳ ಪರಿಶೀಲನೆಯ ಬಳಿಕ, ಪಕ್ಷದ ಶಿಸ್ತು ನಿಯಮಗಳನ್ನು ಉಲ್ಲಂಘಿಸಿ ಸಂಘಟನೆಯ ಗೌರವಕ್ಕೆ ಧಕ್ಕೆ ತಂದಿರುವ ಕಾರಣ ಪುಲವೇಂದ್ರನ್ ಅವರನ್ನು ಮೂಲ ಸದಸ್ಯತ್ವದಿಂದಲೇ ವಜಾಗೊಳಿಸಲಾಗಿದೆ ಎಂದು TVK ಜಿಲ್ಲಾ ಘಟಕ ತಿಳಿಸಿದೆ. ಪಕ್ಷದ ಶಿಸ್ತು ಸಮಿತಿಯ ಶಿಫಾರಸಿನ ಮೇರೆಗೆ ಈ ಕ್ರಮ ಜಾರಿಯಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸನ್ ತಿಳಿಸಿದ್ದಾರೆ.

Must Read