June 28, 2026
Sunday, June 28, 2026
spot_img

ಬೆಳಗಾವಿ ಹೆಸರಿಗೆ ಮಾತ್ರ ಎರಡನೇ ರಾಜಧಾನಿ: ಕತ್ತಲಲ್ಲಿ ಕರಗುತ್ತಿದೆ ಕುಂದಾನಗರಿ

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯದ ಎರಡನೇ ರಾಜಧಾನಿ, ಭೌಗೋಳಿಕವಾಗಿ ಅತ್ಯಂತ ದೊಡ್ಡ ಜಿಲ್ಲೆ, ಸುವರ್ಣ ಸೌಧವನ್ನು ಮಡಿಲಲ್ಲಿಟ್ಟುಕೊಂಡು ರಾಜ್ಯ ರಾಜಕಾರಣದಲ್ಲಿ ಸದಾ ಸದ್ದು ಮಾಡುವ ಗಡಿ ಜಿಲ್ಲೆ ಬೆಳಗಾವಿ. ಆದರೆ, ಇಷ್ಟೆಲ್ಲಾ ಹೆಗ್ಗಳಿಕೆ ಹೊಂದಿರುವ ಈ ಕುಂದಾನಗರಿಯ ಸಾರ್ವಜನಿಕರು ಇಂದು ಕನಿಷ್ಠ ಮೂಲಭೂತ ಸೌಕರ್ಯಗಳೂ ಇಲ್ಲದೆ ಪರದಾಡುವಂತಾಗಿದೆ. ನಗರದ ಪ್ರಮುಖ ರಸ್ತೆ ಹಾಗೂ ವಸತಿ ಪ್ರದೇಶಗಳು ಬೀದಿ ದೀಪಗಳಿಲ್ಲದೆ ಸಂಪೂರ್ಣ ಕತ್ತಲಲ್ಲಿ ಮುಳುಗಿದ್ದು, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿವೇಶನಕ್ಕೆ ಮಾತ್ರ ಸಿಂಗಾರ; ಉಳಿದ ದಿನ ಕತ್ತಲ ದರ್ಬಾರ್!:

ವರ್ಷಕ್ಕೊಮ್ಮೆ ಚಳಿಗಾಲದ ಅಧಿವೇಶನ ಬಂದಾಗ ಮಾತ್ರ ಬೆಳಗಾವಿ ನಗರದಾದ್ಯಂತ ಸ್ವಚ್ಛತೆ, ರಸ್ತೆ ದುರಸ್ತಿ ಹಾಗೂ ರಂಗುರಂಗಿನ ಬೀದಿ ದೀಪಗಳ ಅಲಂಕಾರ ನಡೆದು, ನಗರವು ಮಧುವಣಗಿತ್ತಿಯಂತೆ ಕಂಗೊಳಿಸುತ್ತದೆ. ಆದರೆ ಅಧಿವೇಶನ ಮುಗಿಯುತ್ತಿದ್ದಂತೆ ಕಥೆ ಮೊದಲಿನಂತಾಗುತ್ತದೆ. ಪ್ರಸ್ತುತ ನಗರದಲ್ಲಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಮನೆ ಹಾಗೂ ಸರ್ಕಾರಿ ಕಚೇರಿಗಳ ಮುಂದೆ ಮಾತ್ರ ನಿರಂತರವಾಗಿ ದೀಪಗಳು ಉರಿಯುತ್ತಿದ್ದರೆ, ಸಾರ್ವಜನಿಕರು ಓಡಾಡುವ ರಸ್ತೆಗಳು ಮಾತ್ರ ಕತ್ತಲಕೂಪವಾಗಿವೆ. “ದೊಡ್ಡವರಿಗೊಂದು ನ್ಯಾಯ, ಸಾಮಾನ್ಯ ಜನರಿಗೊಂದು ನ್ಯಾಯವೇ?” ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಶಪಿಸುತ್ತಿದ್ದಾರೆ.

ಕತ್ತಲಲ್ಲಿ ಹೆದ್ದಾರಿಗಳು ನಿಲ್ಲದ ಅಪಘಾತಗಳ ಸರಣಿ:

ಬೆಳಗಾವಿ ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣದ ಬಳಿಯ ಕೋಟೆ ಕೆರೆಯ ಲೇಕ್ ವ್ಯೂ ಆಸ್ಪತ್ರೆ ರಸ್ತೆ ಮಾರ್ಗದಲ್ಲಿ ಬೀದಿ ದೀಪಗಳಿಲ್ಲದೆ ಸಾರ್ವಜನಿಕರು ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ.

ಅಪಾಯದ ವಲಯಗಳಾಗಿ ಮಾರ್ಪಟ್ಟ ಪ್ರಮುಖ ರಸ್ತೆಗಳು:

ಇದನ್ನೂ ಓದಿ:

ಗಾಂಧಿನಗರದಿಂದ ಬಸವನ ಕುಡಚಿ ಮಾರ್ಗ:

ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯ ಈ ವ್ಯಾಪ್ತಿಯಲ್ಲಿ ಒಂದೇ ಒಂದು ಬೀದಿ ದೀಪವೂ ಇಲ್ಲ, ಕತ್ತಲೆಯ ಕಾರಣದಿಂದಾಗಿ ಈ ಮಾರ್ಗದಲ್ಲಿ ಈಗಾಗಲೇ ಹಲವಾರು ವಾಹನ ಸವಾರರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದು, ಸಣ್ಣಪುಟ್ಟ ಗಾಯಗಳಾದ ಉದಾಹರಣೆಗಳಿಗೆ ಲೆಕ್ಕವೇ ಇಲ್ಲದಂತಾಗಿದೆ.

ಅನಗೋಳ ನಾಕಾದಿಂದ ಧರ್ಮವೀರ ಸಂಭಾಜಿ ಚೌಕ್:

ಕಳೆದ ಒಂದು ತಿಂಗಳಿಂದ ಈ ರಸ್ತೆಯು ಸಂಪೂರ್ಣ ಕತ್ತಲಲ್ಲಿ ಮುಳುಗಿದ್ದು, ರಾತ್ರಿ ವೇಳೆ ಸಂಚರಿಸುವ ಜನತೆಗೆ ತೀವ್ರ ಸಂಕಷ್ಟ ಎದುರಾಗಿದೆ.

ಇತರ ಪ್ರಮುಖ ಪ್ರದೇಶಗಳು:

ಟಿಳಕವಾಡಿ, ಶಹಾಪೂರ, ಚಿದಂಬರನಗರ ಹಾಗೂ ವಡಗಾವಿ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳು ‘ಕತ್ತಲೆಯ ಭಾಗ್ಯ’ ಅನುಭವಿಸುತ್ತಿವೆ.

ಮನವಿಗಳೂ ವ್ಯರ್ಥ:

ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ ಈ ಗಂಭೀರ ಸಮಸ್ಯೆಯ ಕುರಿತು ಸ್ಥಳೀಯ ಸಾರ್ವಜನಿಕರು ಮಹಾನಗ ಪಾಲಿಕೆಯ ಅಧಿಕಾರಿಗಳಿಗೆ ಹಲವು ಬಾರಿ ಲಿಖಿತ ಹಾಗೂ ಮೌಖಿಕ ಮನವಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ಉದಾಸೀನ ಮನೋಭಾವನೆಗೆ ನಾಗರಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕತ್ತಲೆಯನ್ನೇ ಬಂಡವಾಳ ಮಾಡಿಕೊಂಡು ರಾತ್ರಿ ವೇಳೆ ಸಾರ್ವಜನಿಕರ ಸುಲಿಗೆ ಅಥವಾ ಇತರೆ ಅಕ್ರಮ ಚಟುವಟಿಕೆಗಳು ನಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.

ಇನ್ನಾದರೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಉನ್ನತ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ನಗರದಾದ್ಯಂತ ಕೆಟ್ಟುಹೋಗಿರುವ ಬೀದಿ ದೀಪಗಳನ್ನು ದುರಸ್ತಿಗೊಳಿಸಬೇಕು. ಆ ಮೂಲಕ ಸಾರ್ವಜನಿಕರಿಗೆ ಹಾಗೂ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆನ್ನುವುದು ಕುಂದಾನಗರಿಯ ಜನತೆಯ ಆಶಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !