ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಹೊರವಲಯ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದ್ದು, ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ, ಕಾರಿನಲ್ಲಿದ್ದ ಪತ್ನಿ ಮತ್ತು ಮಗನನ್ನು ಅಪಹರಿಸಿ, ಸುಮಾರು 180 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದೆ.
ಪ್ರಾಥಮಿಕ ಮೂಲಗಳ ಮಾಹಿತಿ ಪ್ರಕಾರ ದರೋಡೆಗೆ ಒಳಗಾದವರು ಕೇರಳ ಮೂಲದ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಉದ್ಯಮ ನಡೆಸುವವರು ಎಂದು ಗೊತ್ತಾಗಿದೆ. ಅವರು ತನ್ನ ಪತ್ನಿ ಹಾಗೂ ಮಗನೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಸಾಂಗ್ಲಿಯಿಂದ ಪಯ್ಯನ್ನೂರಿಗೆ ತೆರಳುತ್ತಿದ್ದ ವೇಳೆ ಸೋಮವಾರ ಈ ಘಟನೆ ನಡೆದಿದೆ.
ಕಾರು ಬೈಕಂಪಾಡಿ ಜಂಕ್ಷನ್‌ನ ಹೋಟೆಲ್ ಸಮೀಪ ತಲುಪುತ್ತಿದ್ದಂತೆ ಇನ್ನೋವಾ ಕಾರಿನಲ್ಲಿ ಬಂದ ಸುಮಾರು ಏಳು ಮಂದಿ ದುಷ್ಕರ್ಮಿಗಳು ಅವರ ಕಾರಿಗೆ ಅಡ್ಡಗಟ್ಟಿದ್ದಾರೆ. ಬಳಿಕ ವಿಕಾಸ್ ಅವರನ್ನು ಬಲವಂತವಾಗಿ ಕಾರಿನಿಂದ ಹೊರಗೆ ಇಳಿಸಿ, ಪತ್ನಿ ಮತ್ತು ಮಗ ಇದ್ದ ಕಾರನ್ನೇ ಅಪಹರಿಸಿಕೊಂಡು ಪರಾರಿಯಾಗಿದ್ದಾರೆ. ನಂತರ ಪಣಂಬೂರು ಬೀಚ್ ರಸ್ತೆಯತ್ತ ಕಾರನ್ನು ಕೊಂಡೊಯ್ದ ಆರೋಪಿಗಳು, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾರೆ. ಆದರೆ ಮಹಿಳೆ ಧರಿಸಿದ್ದ ಚಿನ್ನದ ಸರವನ್ನು ಮುಟ್ಟದೆ ಬಿಟ್ಟಿದ್ದಾರೆ. ಬಳಿಕ ತಾಯಿ ಮತ್ತು ಮಗನನ್ನು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ಬಿಟ್ಟು, ಕಾರಿನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ತೀವ್ರಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳ ಚಲನವಲನ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಕಳವಾದ ಕಾರು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಶೋಧ ಮುಂದುವರಿಸಿದ್ದಾರೆ.



