June 29, 2026
Monday, June 29, 2026
spot_img

ಹೊಸ ಡ್ರಗ್ಸ್ ಟ್ರೆಂಡ್‌ಗೆ ಬೆಚ್ಚಿಬಿದ್ದ ಪೊಲೀಸರು: ಹೆಚ್ಚಿನ ನಶೆಗಾಗಿ ಜೀವರಕ್ಷಕ ಔಷಧಿಗಳ ಬಳಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೇರಳದಲ್ಲಿ ಗಾಂಜಾ ಮತ್ತು ರಾಸಾಯನಿಕ ಮಾದಕ ವಸ್ತುಗಳ ವಿರುದ್ಧ ನಡೆಯುತ್ತಿರುವ ‘ಆಪರೇಷನ್ ಟೂಫಾನ್’ ಕಾರ್ಯಾಚರಣೆಯ ವೇಳೆ ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.


ಮಾದಕ ವಸ್ತುಗಳ ಬದಲಾಗಿ ಕೆಲವು ಯುವಕರು ಈಗ ಜೀವರಕ್ಷಕ ಮತ್ತು ವೈದ್ಯರ ಸೂಚನೆಯಡಿ ಮಾತ್ರ ನೀಡಬೇಕಾದ ಔಷಧಿಗಳನ್ನು ಬಳಸಿ ವ್ಯಸನಕ್ಕೆ ಒಳಗಾಗುತ್ತಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಮಟ್ಟದ ಮಾದಕತೆ ದೊರೆಯುತ್ತದೆ ಎಂಬ ಕಾರಣಕ್ಕೆ ನೋವು ನಿವಾರಕ, ಅರಿವಳಿಕೆ ಹಾಗೂ ಕೆಲವು ಕ್ಯಾನ್ಸರ್ ಚಿಕಿತ್ಸೆಯ ಔಷಧಿಗಳನ್ನು ದುರ್ಬಳಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಔಷಧಿಗಳನ್ನು ಇತರ ರಾಸಾಯನಿಕಗಳೊಂದಿಗೆ ಬೆರೆಸಿ ಬಳಸುವ ಪ್ರಕರಣಗಳೂ ಬೆಳಕಿಗೆ ಬಂದಿವೆ.

ತನಿಖೆ ವೇಳೆ, ಕೆಲವರು ನಕಲಿ ವೈದ್ಯಕೀಯ ಚೀಟಿಗಳನ್ನು (ಪ್ರಿಸ್ಕ್ರಿಪ್ಷನ್) ಸೃಷ್ಟಿಸಿ ಔಷಧಿಗಳನ್ನು ಖರೀದಿಸುತ್ತಿರುವುದು ಪತ್ತೆಯಾಗಿದೆ. ವಿಶೇಷವಾಗಿ ಕೊಟ್ಟಾಯಂ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಾಗಿವೆ ಎಂದು ಮೆಡಿಕಲ್ ಸ್ಟೋರ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಹೊರಗೆ ಸಿಗುವ ಒಪಿ ಸ್ಲಿಪ್‌ಗಳನ್ನು ಬಳಸಿ ಔಷಧಿಗಳ ಹೆಸರನ್ನು ಸೇರಿಸಿ ನಕಲಿ ಪ್ರಿಸ್ಕ್ರಿಪ್ಷನ್ ಸಿದ್ಧಪಡಿಸುವ ಜಾಲವೂ ಸಕ್ರಿಯವಾಗಿದೆ ಎನ್ನಲಾಗಿದೆ.


ವೈದ್ಯರ ಲಿಖಿತ ಸೂಚನೆಯಿಲ್ಲದೆ ಮಾರಾಟ ಮಾಡಬಾರದ ಔಷಧಿಗಳೂ ಕೆಲ ಮೆಡಿಕಲ್ ಸ್ಟೋರ್‌ಗಳಿಂದ ಸುಲಭವಾಗಿ ಸಿಗುತ್ತಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಕೆಲವು ಅಂಗಡಿಗಳು ಪ್ರಿಸ್ಕ್ರಿಪ್ಷನ್ ಪರಿಶೀಲಿಸದೆ ಔಷಧಿಗಳನ್ನು ನೀಡುತ್ತಿರುವುದು ಹಾಗೂ ಕೆಲವೆಡೆ ವ್ಯಾಪಾರ ಹೆಚ್ಚಿಸುವ ಉದ್ದೇಶದಿಂದ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮೆಡಿಕಲ್ ಸ್ಟೋರ್‌ಗಳ ಮೇಲೂ ಪೊಲೀಸರು ನಿಗಾ ಹೆಚ್ಚಿಸಲು ತೀರ್ಮಾನಿಸಿದ್ದಾರೆ. ಇತ್ತೀಚೆಗೆ ಮಾದಕ ವ್ಯಸನ ಪ್ರಕರಣಗಳಲ್ಲಿ ಬಂಧಿತರಾದ ಹಲವರ ವಿಚಾರಣೆಯಲ್ಲಿ ಔಷಧಿಗಳ ದುರುಪಯೋಗದ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ‘ಆಪರೇಷನ್ ಟೂಫಾನ್’ ಎರಡನೇ ಹಂತದಲ್ಲಿ ಈ ಜಾಲದ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ.


ಜೊತೆಗೆ, ವೈದ್ಯಕೀಯ ಔಷಧಿಗಳನ್ನು ಆನ್‌ಲೈನ್ ಮೂಲಕ ಅಕ್ರಮವಾಗಿ ಖರೀದಿಸಿ ಪೂರೈಕೆ ಮಾಡಲಾಗುತ್ತಿದೆಯೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ವಿಸ್ತರಿಸಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಈ ಹೊಸ ಮಾದರಿಯ ವ್ಯಸನ ತಡೆಯಲು ಆರೋಗ್ಯ ಇಲಾಖೆ, ಔಷಧ ನಿಯಂತ್ರಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕ್ರಮ ಕೈಗೊಳ್ಳಲು ಮುಂದಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !