ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಮುಂಗಾರು ಮಳೆ ಚುರುಕಾಗಿದ್ದು, ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ನಿರಂತರ ಮಳೆ ಮತ್ತು ಬಿರುಗಾಳಿಯ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಉತ್ತಮ ಮಟ್ಟ ತಲುಪಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಗಾಳಿಯಲ್ಲಿನ ಧೂಳಿನ ಕಣಗಳಾದ PM2.5 ಮತ್ತು PM10 ಪ್ರಮಾಣ ಕಡಿಮೆಯಾಗಿದ್ದು, ಜನರು ನಿರಾಳವಾಗಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಶುದ್ಧ ಗಾಳಿ: ಯಾದಗಿರಿ ನಂಬರ್ 1!
ವಾಹನ ಹಾಗೂ ಕೈಗಾರಿಕಾ ಮಾಲಿನ್ಯದಿಂದ ಕಂಗಾಲಾಗಿದ್ದ ಬೆಂಗಳೂರಿನಲ್ಲಿ ಮುಂಗಾರು ಮಾರುತಗಳು ವಾತಾವರಣವನ್ನು ಸ್ವಚ್ಛಗೊಳಿಸಿವೆ. ಇಂದು ಹೊರಗಿನ ದೈಹಿಕ ಚಟುವಟಿಕೆಗಳಿಗೆ ರಾಜಧಾನಿ ಅತ್ಯಂತ ಯೋಗ್ಯವಾಗಿದೆ. ಇನ್ನು ರಾಜ್ಯದಲ್ಲೇ ಅತ್ಯಂತ ಕಡಿಮೆ ಮಾಲಿನ್ಯ ಹೊಂದಿದ ಜಿಲ್ಲೆಗಳಾಗಿ ಯಾದಗಿರಿ (AQI 17) ಮತ್ತು ಚಿಕ್ಕಬಳ್ಳಾಪುರ (AQI 23) ಹೊರಹೊಮ್ಮಿವೆ.
ಸುರಕ್ಷಿತ ವಲಯದಲ್ಲಿ ಕರಾವಳಿ ಮತ್ತು ಇತರೆ ನಗರಗಳು
ನಿರಂತರ ಭಾರಿ ಮಳೆಗೆ ತತ್ತರಿಸಿರುವ ಕರಾವಳಿಯ ಮಂಗಳೂರು ಹಾಗೂ ಉಡುಪಿಯಲ್ಲಿ AQI 25 ಕ್ಕಿಂತ ಕಡಿಮೆ ದಾಖಲಾಗಿದ್ದು, ಅತ್ಯಂತ ಶುದ್ಧ ಗಾಳಿ ಲಭ್ಯವಿದೆ. ಇತ್ತ ಸಾಂಸ್ಕೃತಿಕ ನಗರಿ ಮೈಸೂರು ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ AQI 35 ರಿಂದ 45 ರ ಆಸುಪಾಸಿನಲ್ಲಿದ್ದು, ಸಂಪೂರ್ಣ ಸುರಕ್ಷಿತ ವಲಯದಲ್ಲಿದೆ. ಮಲೆನಾಡು ಹಾಗೂ ಉತ್ತರ ಒಳನಾಡಿನ ಜನರಿಗೂ ಇಂದು ಕರಾವಳಿಯಂತೆಯೇ ಶುದ್ಧ ಹವಾಮಾನದ ಅನುಭವ ಸಿಗುತ್ತಿದೆ.



