ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಷ್ಟಪಟ್ಟು ಕಟ್ಟಿದ್ದ ಅಂಗಡಿಯೊಂದು ಕಣ್ಮುಂದೆಯೇ ಹೊತ್ತಿ ಉರಿದಿದ್ದು, ಆಘಾತದಿಂದ ಮಾಲೀಕನಿಗೆ ಹೃದಯಾಘಾತವಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಪಶುವೈದ್ಯ ಇಲಾಖೆ ಕಚೇರಿ ಸಮೀಪ ಇರುವ ನಂದಿನಿ ಮಿಲ್ಕ್ ಪಾರ್ಲರ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮಾಲೀಕರಾದ ಕಣಜೇನಹಳ್ಳಿಯ ವೆಂಕಟೇಶ್ ಅಂಗಡಿ ಮುಂದೆಯೇ ಪ್ರಾಣಬಿಟ್ಟಿದ್ದಾರೆ.
ಸೋಮವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಮಿಲ್ಕ್ ಪಾರ್ಲರ್ನಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿ ವೆಂಕಟೇಶ್ ಅವರಿಗೆ ತಲುಪಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಅವರು ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ನಂದಿಸಿದ್ದಾರೆ. ಆದರೆ ಜೀವನಕ್ಕೆ ಆಧಾರವಾಗಿದ್ದ ಅಂಗಡಿಯ ಸ್ಥಿತಿ ಕಂಡು ಆಘಾತಕ್ಕೊಳಗಾದ ವೆಂಕಟೇಶ್ಗೆ ಸ್ಥಳದಲ್ಲಿಯೇ ಹೃದಯಾಘಾತವಾಗಿದೆ.
ಹಲವು ವರ್ಷಗಳಿಂದ ಈ ಅಂಗಡಿ ನಡೆಸುತ್ತಿದ್ದ ವೆಂಕಟೇಶ್ಗೆ ಪಾರ್ಲರ್ ಜೀವಾಳವಾಗಿತ್ತು. ನೋವಿನಿಂದ ಅಂಗಡಿ ಮುಂದೆ ಕುಸಿದುಬಿದ್ದ ವೆಂಕಟೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ಯತ್ನಿಸಿದ್ದಾರೆ. ಅದಕ್ಕೂ ಮುನ್ನವೇ ಅವರ ಪ್ರಾಣ ಹೋಗಿದೆ. ಇಡೀ ಕುಟುಂಬ ಶೋಕದಲ್ಲಿ ಮುಳುಗಿದೆ. ಬೆಂಕಿ ಹೊತ್ತಿದ್ದಕ್ಕೆ ಕಾರಣ ಏನು ಎಂದು ತಿಳಿದುಬಂದಿಲ್ಲ.



