ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಣಜಿ ಗ್ರಾಮದಲ್ಲಿ ಮದುವೆಯಾದ ಕೇವಲ ಎರಡೇ ತಿಂಗಳಿಗೆ 24 ವರ್ಷದ ನವವಿವಾಹಿತೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟ ಯುವತಿಯನ್ನು ಸ್ವಾತಿ ಎಂದು ಗುರುತಿಸಲಾಗಿದೆ. ಕೇವಲ ಎರಡು ತಿಂಗಳ ಹಿಂದಷ್ಟೇ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ್ ಎಂಬುವವರ ಜೊತೆ ಸ್ವಾತಿ ವಿವಾಹ ನಡೆದಿತ್ತು. ಇತ್ತೀಚೆಗೆ ಗರ್ಭಿಣಿಯಾಗಿದ್ದ ಸ್ವಾತಿಗೆ ತೀವ್ರ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ 20 ದಿನಗಳ ಹಿಂದಷ್ಟೇ ಹಣಜಿ ಗ್ರಾಮದಲ್ಲಿದ್ದ ತಮ್ಮ ತವರು ಮನೆಗೆ ಬಂದಿದ್ದರು.
ತಂದೆ ಮತ್ತು ತಾಯಿ ಜಮೀನು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಸ್ವಾತಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೆಯ ಬಾಗಿಲು ಒಳಗಿನಿಂದ ಹಾಕಿರುವುದನ್ನು ಗಮನಿಸಿದ ಅಕ್ಕಪಕ್ಕದವರು ಜಮೀನಿನಲ್ಲಿದ್ದ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ.ತಕ್ಷಣವೇ ಧಾವಿಸಿ ಬಂದ ಸ್ಥಳೀಯರು ಮನೆಯ ಬಾಗಿಲನ್ನು ಮುರಿದು, ಸ್ವಾತಿಯವರನ್ನು ಸೀರೆಯ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:
ಆತ್ಮಹತ್ಯೆಗೆ ಅಸಲಿ ಕಾರಣವೇನು?
ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಗರ್ಭಾವಸ್ಥೆಯ ಕಾರಣದಿಂದ ಸ್ವಾತಿಗೆ ತೀವ್ರವಾಗಿ ವಾಂತಿಯಾಗುತ್ತಿತ್ತು ಹಾಗೂ ಸರಿಯಾಗಿ ಊಟ, ತಿಂಡಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೇ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಅವರು ಈ ಕಠಿಣ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸೊರಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



