ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಮಹಾನ್’ ಸಿನಿಮಾಗೆ ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್ಕುಮಾರ್ ಭರ್ಜರಿ ಎಂಟ್ರಿಯಾಗಿದ್ದು, ಅವರು ಚಿತ್ರದಲ್ಲಿ ರೈತರ ಪರ ಧ್ವನಿ ಎತ್ತುವ ಖಡಕ್ ಹಿರಿಯ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೈತರ ಬದುಕು ಮತ್ತು ಸಾಮಾಜಿಕ ಕಾಳಜಿಯ ಕಥಾಹಂದರ ಹೊಂದಿರುವ ಈ ವಿಭಿನ್ನ ಚಿತ್ರವನ್ನು ಪಿ.ಸಿ. ಶೇಖರ್ ನಿರ್ದೇಶಿಸುತ್ತಿದ್ದು, ಶಿವಣ್ಣ ಆಗಮನದಿಂದ ಸಿನಿಮಾದ ನಿರೀಕ್ಷೆಗಳು ಮತ್ತಷ್ಟು ಹೆಚ್ಚಿದೆ.
ಖಡಕ್ ಲಾಯರ್ ಪಾತ್ರದಲ್ಲಿ ಶಿವಣ್ಣ!
‘ಮಹಾನ್’ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅತ್ಯಂತ ಪ್ರಮುಖವಾದ ಹಿರಿಯ ವಕೀಲರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಮಾಜದಲ್ಲಿ ಅನ್ಯಾಯ ಹಾಗೂ ರೈತರಿಗೆ ತೊಂದರೆ ಎದುರಾದಾಗ ಇಡೀ ವ್ಯವಸ್ಥೆಯನ್ನು ತಿದ್ದುವ ಶಕ್ತಿಯಾಗಿ ಅವರ ಪಾತ್ರ ಮೂಡಿಬರಲಿದೆ. ಈ ಹಿಂದೆ ‘ರಿಷಿ’ ಮತ್ತು ‘ಮಾಸ್ ಲೀಡರ್’ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಶಿವಣ್ಣ ಮತ್ತು ವಿಜಯ್ ರಾಘವೇಂದ್ರ, ಬರೋಬ್ಬರಿ 9 ವರ್ಷಗಳ ದೀರ್ಘಾವಧಿಯ ಬಳಿಕ ಮತ್ತೆ ಒಂದೇ ಪರದೆಯ ಮೇಲೆ ಅಬ್ಬರಿಸಲಿದ್ದಾರೆ. ನಿಜ ಜೀವನದಲ್ಲೂ ಹತ್ತಿರದ ಸಂಬಂಧಿಗಳಾಗಿರುವ ಈ ಇಬ್ಬರು ನಟರ ಜುಗಲ್ಬಂದಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
“ರೈತನೇ ನಿಜವಾದ ಮಹಾನ್!” – ನಿರ್ದೇಶಕ ಪಿ.ಸಿ. ಶೇಖರ್
ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡಿರುವ ನಿರ್ದೇಶಕರು, “ನಮ್ಮ ದೇಶಕ್ಕೆ ಸೈನಿಕರು ಎಷ್ಟು ಮುಖ್ಯವೋ, ರೈತರು ಕೂಡ ಅಷ್ಟೇ ಮುಖ್ಯ. ನಾವ್ಯಾರೂ ರೈತರಿಲ್ಲದೆ ಬದುಕಲು ಸಾಧ್ಯವಿಲ್ಲ, ಆದರೆ ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಇಲ್ಲಿ ‘ಮಹಾನ್’ ಎಂದರೆ ಅದು ನಮ್ಮ ಹೆಮ್ಮೆಯ ರೈತ” ಎಂದು ಸ್ಪಷ್ಟಪಡಿಸಿದ್ದಾರೆ. ನಟ ವಿಜಯ್ ರಾಘವೇಂದ್ರ ಈ ಚಿತ್ರದಲ್ಲಿ ಕಷ್ಟಪಟ್ಟು ದುಡಿಯುವ ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಹಕ್ಕುಗಳಿಗಾಗಿ ಕೋರ್ಟ್ನಲ್ಲಿ ಶಿವಣ್ಣ ಹೋರಾಡಲಿದ್ದಾರೆ.
ಇದನ್ನೂ ಓದಿ;
ಭರದಿಂದ ಸಾಗಿದ ಶೂಟಿಂಗ್, ಭಾರಿ ತಾರಾಬಳಗ
‘ಮಹಾನ್’ ಸಿನಿಮಾವು ದೊಡ್ಡ ತಾರಾಗಣವನ್ನು ಹೊಂದಿದ್ದು, ರಾಧಿಕಾ ನಾರಾಯಣ್, ವರ್ಷ ಬೊಳ್ಳಮ್ಮ, ನಮ್ರತಾ ಗೌಡ, ಮಿತ್ರ ಮತ್ತು ಕಿರಣ್ ಶ್ರೀನಿವಾಸ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಆಕಾಶ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪ್ರಕಾಶ್ ಬುದ್ದೂರು ಅತ್ಯಂತ ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಸದ್ಯ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಇದೇ ವರ್ಷ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.



