ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರಮುಖ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ. ಇಂಜಿನಿಯರಿಂಗ್ ಆರನೇ ಸೆಮಿಸ್ಟರ್‌ನ ಪರೀಕ್ಷೆ ಮುಗಿದ ಕೇವಲ 5 ನಿಮಿಷಗಳಲ್ಲೇ ಫಲಿತಾಂಶ ಪ್ರಕಟಿಸಿ ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.
ವಿಟಿಯು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಯು.ಜೆ. ಉಜ್ಜಲ್ ಹಾಗೂ ಕುಲಸಚಿವ ಡಾ. ಪ್ರಸಾದ ಬಿ. ರಾಂಪುರೆ ಜಂಟಿಯಾಗಿ ಈ ಐತಿಹಾಸಿಕ ಫಲಿತಾಂಶವನ್ನು ಬಿಡುಗಡೆ ಮಾಡಿದ್ದಾರೆ.
300 ಸೆಕೆಂಡ್‌ನಲ್ಲಿ 60 ಸಾವಿರ ವಿದ್ಯಾರ್ಥಿಗಳ ರಿಸಲ್ಟ್!
ಇಂದು ನಡೆದ ಬಿ.ಇ. ಮತ್ತು ಬಿ.ಟೆಕ್ 6ನೇ ಸೆಮಿಸ್ಟರ್ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 60,856 ವಿದ್ಯಾರ್ಥಿಗಳು ಹಾಜರಾಗಿದ್ದರು. ಸಂಜೆ 5:30ಕ್ಕೆ ಪರೀಕ್ಷೆಯ ಕೊನೆಯ ಗಂಟೆ ಬಾರಿಸುತ್ತಿದ್ದಂತೆ ಅಲರ್ಟ್ ಆದ ವಿಟಿಯುನ ಪರೀಕ್ಷಾ ಮಂಡಳಿ, ಕೇವಲ 5 ನಿಮಿಷಗಳಲ್ಲಿ ಅಂದರೆ ಸಂಜೆ 5:35ಕ್ಕೆಲ್ಲಾ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಅಪ್‌ಲೋಡ್ ಮಾಡಿದೆ. ಈ ಬಾರಿ ಒಟ್ಟಾರೆ ಶೇಕಡಾ 76.84 ರಷ್ಟು ಉತ್ತೀರ್ಣ ಪ್ರಮಾಣ ದಾಖಲಾಗಿದೆ.
ಹಳೇ ದಾಖಲೆ ಮುರಿದ ವಿಟಿಯು
ಈ ಹಿಂದೆ ಮೇ ತಿಂಗಳಲ್ಲಿ ನಡೆದಿದ್ದ ಅಂತಿಮ ವರ್ಷದ ಬಿ.ಇ ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷೆ ಮುಗಿದ 10 ನಿಮಿಷಗಳಲ್ಲಿ ಪ್ರಕಟಿಸಿ ವಿಟಿಯು ದಾಖಲೆ ಬರೆದಿತ್ತು. ಇದೀಗ ತಂತ್ರಜ್ಞಾನದ ಗರಿಷ್ಠ ಬಳಕೆಯಿಂದ ಕೇವಲ 5 ನಿಮಿಷಗಳಲ್ಲೇ ಫಲಿತಾಂಶ ನೀಡಿ ತಾನು ಸೃಷ್ಟಿಸಿದ್ದ ಹಳೆಯ ದಾಖಲೆಯನ್ನೇ ತಾನೇ ಬ್ರೇಕ್ ಮಾಡಿದೆ.
ಇದನ್ನೂ ಓದಿ:
ಡಿಜಿಟಲ್ ಮೌಲ್ಯಮಾಪನದ ಮ್ಯಾಜಿಕ್
ಈ ಅದ್ಭುತ ಸಾಧನೆ ಕುರಿತು ಮಾತನಾಡಿದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ಪರೀಕ್ಷೆ ಮುಗಿದ ತಕ್ಷಣ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಆತಂಕದಿಂದ ಕಾಯುತ್ತಿರುತ್ತಾರೆ. ಅವರ ಸಮಯ ಉಳಿಸಲು ನಾವು ಮುಂಚಿತವಾಗಿಯೇ ಅತ್ಯಾಧುನಿಕ ಡಿಜಿಟಲ್ ಮೌಲ್ಯಮಾಪನ ಮತ್ತು ಸ್ವಯಂಚಾಲಿತ ತಂತ್ರಜ್ಞಾನದ ಸಿದ್ಧತೆ ಮಾಡಿಕೊಂಡಿದ್ದೆವು. ಈ ಪ್ರಕ್ರಿಯೆಯಿಂದಾಗಿ ಎಂದಿಗಿಂತ 21 ದಿನಗಳ ಮುಂಚಿತವಾಗಿಯೇ ಮೌಲ್ಯಮಾಪನ ಮುಗಿದಿದೆ. ಈ ಯಶಸ್ಸಿಗೆ ಶ್ರಮಿಸಿದ ಪರೀಕ್ಷಾ ವಿಭಾಗ ಮತ್ತು ಎಲ್ಲಾ ಕಾಲೇಜು ಸಿಬ್ಬಂದಿಗೆ ಅಭಿನಂದನೆಗಳು ಎಂದಿದ್ದಾರೆ.



