June 30, 2026
Tuesday, June 30, 2026
spot_img

CINE | ಪ್ಯಾರೀಸ್ ಚಿತ್ರಮಂದಿರದಲ್ಲಿ ರಾಜಮೌಳಿ ಹೆಸರಿನ ‘ಖಾಯಂ ಸೀಟ್’: ಭಾರತೀಯ ಚಿತ್ರರಂಗಕ್ಕೆ ಜಾಗತಿಕ ಗೌರವ!

ಹೊಸದಿಗಂತ ಡಿಜಿಟಲ್‌ ಡಸ್ಕ್:

ಬಾಹುಬಲಿ’ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ‘ಆರ್‌ಆರ್‌ಆರ್’ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ಗತಿಯನ್ನೇ ಬದಲಿಸಿದ ದೃಶ್ಯವೈಭವದ ಸರದಾರ ಎಸ್.ಎಸ್. ರಾಜಮೌಳಿ ‌  ಮುಕುಟಕ್ಕೆ ಮತ್ತೊಂದು ಜಾಗತಿಕ ಗರಿ ಲಭಿಸಿದೆ. ಫ್ರಾನ್ಸ್‌ನ ವಿಶ್ವಪ್ರಸಿದ್ಧ ಚಲನಚಿತ್ರ ಸಂಸ್ಥೆಯಾದ ‘ಸಿನೆಮಾಟೆಕ್ ಫ್ರಾಂಚೈಸ್’, ಚಿತ್ರರಂಗಕ್ಕೆ ರಾಜಮೌಳಿ ನೀಡಿರುವ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಅಲ್ಲಿನ ಚಿತ್ರಮಂದಿರದ ಸೀಟ್ ಒಂದಕ್ಕೆ ಅವರ ಹೆಸರನ್ನು ಖಾಯಂ ಆಗಿ ಇಡುವ ಮೂಲಕ ಅತ್ಯುನ್ನತ ಗೌರವ ಸಮರ್ಪಿಸಿದೆ.

ಸದ್ಯ ರಾಜಮೌಳಿ ಯೂರೋಪ್ ಪ್ರವಾಸದ ಅಂಗವಾಗಿ ಪ್ಯಾರೀಸ್‌ನಲ್ಲಿ ಅವರ ‘ಈಗ’, ‘ಬಾಹುಬಲಿ’ ಮತ್ತು ‘ಆರ್‌ಆರ್‌ಆರ್’ ಸಿನಿಮಾಗಳ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಅವರಿಗೆ ಈ ಸರ್ಪ್ರೈಸ್ ಗೌರವವನ್ನು ನೀಡಲಾಗಿದೆ.

ಇದು ನಾನು ಎಂದೂ ಊಹಿಸದ ಮಧುರ ಅಚ್ಚರಿ: ರಾಜಮೌಳಿ ಭಾವುಕ

ತಮಗೆ ಲಭಿಸಿದ ಈ ಅಪರೂಪದ ಗೌರವದ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಜಮೌಳಿ, “ಪ್ಯಾರೀಸ್‌ನಲ್ಲಿ ನನ್ನ ಸಿನಿಮಾಗಳ ಪ್ರದರ್ಶನವಾಗುವುದೇ ನನಗೆ ದೊಡ್ಡ ಗೌರವ. ಆದರೆ, ಇಂತಹದೊಂದು ಮಧುರ ಅಚ್ಚರಿಯನ್ನು ನಾನು ಎಂದೂ ನಿರೀಕ್ಷಿಸಿರಲಿಲ್ಲ. ವಿಶ್ವದ ಅತ್ಯಂತ ಪೌರಾಣಿಕ ಚಲನಚಿತ್ರ ಸಂಸ್ಥೆಯ ಹೆನ್ರಿ ಲ್ಯಾಂಗ್ಲೋಯಿಸ್ ಸಭಾಂಗಣದಲ್ಲಿ ನನ್ನ ಹೆಸರಿನ ಖಾಯಂ ಸ್ಥಾನ ಸಿಕ್ಕಿರುವುದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇದನ್ನು ನನ್ನ ಜೀವನದ ಕೊನೆಯವರೆಗೂ ಅತ್ಯಂತ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇನೆ” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:

ರಾಜಮೌಳಿ ಸಿನಿಮಾ ನೋಡಲು 8 ಗಂಟೆ ಕುಳಿತ ಆಸ್ಕರ್ ವಿಜೇತ ಫ್ರೆಂಚ್ ನಿರ್ದೇಶಕ!

ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು 93 ವರ್ಷದ ಆಸ್ಕರ್ ಪ್ರಶಸ್ತಿ ವಿಜೇತ ಪ್ರಸಿದ್ಧ ಫ್ರೆಂಚ್ ಚಲನಚಿತ್ರ ನಿರ್ದೇಶಕ ಕೋಸ್ಟಾ-ಗಾವ್ರಾಸ್ ಉಪಸ್ಥಿತಿ. ಆರಂಭದಲ್ಲಿ ಕೇವಲ ‘ಆರ್‌ಆರ್‌ಆರ್’ ಸಿನಿಮಾ ಮಾತ್ರ ವೀಕ್ಷಿಸಲು ಬಂದಿದ್ದ ಕೋಸ್ಟಾ-ಗಾವ್ರಾಸ್, ರಾಜಮೌಳಿ ಮೇಕಿಂಗ್ ಮತ್ತು ಕಥೆ ಹೇಳುವ ಶೈಲಿಗೆ ಮಾರುಹೋಗಿ ತಮ್ಮ ಇಡೀ ದಿನದ ವೇಳಾಪಟ್ಟಿಯನ್ನೇ ಬದಲಾಯಿಸಿಕೊಂಡರು. ಸತತ 8 ಗಂಟೆಗಳ ಕಾಲ ಥಿಯೇಟರ್‌ನಲ್ಲೇ ಕುಳಿತು ‘ಬಾಹುಬಲಿ’ ಹಾಗೂ ‘ಈಗ’ ಸಿನಿಮಾಗಳನ್ನು ವೀಕ್ಷಿಸಿದ್ದಲ್ಲದೆ, ರಾಜಮೌಳಿ ಮಾಸ್ಟರ್‌ಕ್ಲಾಸ್ ಸಂವಾದದಲ್ಲೂ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರ ‘ವಾರಣಾಸಿ’ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು 2027ರ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !