ಹೊಸದಿಗಂತ ವರದಿ ಬೆಳಗಾವಿ:
ರಾಜ್ಯದ ಯಾವುದೇ ದೇವಾಲಯದಲ್ಲಿ ಭಕ್ತರ ಕಾಣಿಕೆ ಹಾಗೂ ಹುಂಡಿ ಹಣ ದುರುಪಯೋಗವಾಗಲು ಅವಕಾಶ ನೀಡುವುದಿಲ್ಲ. ಹಣಕಾಸು ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ, ಮುಜರಾಯಿ ಹಾಗೂ ಕ್ರೀಡಾ ಸಚಿವ ಪರಮೇಶ್ವರ ಎಚ್ಚರಿಕೆ ನೀಡಿದರು.
ಬುಧವಾರ ಸುವರ್ಣ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಧಾರ್ಮಿಕ ದತ್ತಿ ಇಲಾಖೆಗೆ ಎಚ್ಚರಿಕೆಯ ಗಂಟೆಯಾಗಿದ್ದು, ಹೆಚ್ಚಿನ ಆದಾಯ ಹೊಂದಿರುವ ‘ಎ’ ಮತ್ತು ‘ಬಿ’ ವರ್ಗದ ದೇವಾಲಯಗಳಲ್ಲಿ ಹಣಕಾಸು ವ್ಯವಹಾರ, ಹುಂಡಿ ಎಣಿಕೆ ಹಾಗೂ ವೆಚ್ಚದ ಮೇಲೆ ವಿಶೇಷ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.
ಹುಂಡಿ ತೆರೆಯುವುದು, ಹಣ ಎಣಿಕೆ, ಬ್ಯಾಂಕ್ಗೆ ಜಮೆ ಮಾಡುವುದು ಹಾಗೂ ವೆಚ್ಚದ ಲೆಕ್ಕಪತ್ರ ನಿರ್ವಹಣೆಗೆ ಏಕರೂಪ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸಲಾಗುವುದು. ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.
ದೇಗುಲ ಆಸ್ತಿ ಸಮೀಕ್ಷೆಗೆ ಸೂಚನೆ: ರಾಜ್ಯದ ‘ಎ’, ‘ಬಿ’ ಹಾಗೂ ‘ಸಿ’ ವರ್ಗದ ದೇವಾಲಯಗಳಿಗೆ ಸೇರಿದ ಜಮೀನು, ನಿವೇಶನ ಸೇರಿದಂತೆ ಎಲ್ಲಾ ಆಸ್ತಿಗಳ ಸಮಗ್ರ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಒತ್ತುವರಿಯಾಗಿರುವ ಆಸ್ತಿಗಳನ್ನು ಗುರುತಿಸಿ, ಗಡಿ ನಿಗದಿಪಡಿಸಿ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
“ದೇವಾಲಯದ ಆಸ್ತಿ ದೇವಾಲಯಕ್ಕೇ ಸೇರಬೇಕು. ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸಿ ದಾಖಲೆಗಳನ್ನು ಸರಿಪಡಿಸಿ ಸಂರಕ್ಷಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಮಾಸ್ಟರ್ ಪ್ಲಾನ್: ಸವದತ್ತಿ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಲಾಗಿದ್ದು, ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಭಕ್ತರಿಗೆ ಸುಗಮ ದರ್ಶನ, ಪ್ರಸಾದ ವಿತರಣೆ, ಕುಡಿಯುವ ನೀರು, ಶೌಚಾಲಯ, ವಸತಿ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಹುಂಡಿ ಹಣ ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ: ಜಿ. ಪರಮೇಶ್ವರ
ಡಾ.ಜಿ.ಪರಮೇಶ್ವರ್



