ಹೊಸದಿಗಂತ ಬೆಳಗಾವಿ:
ರಾಜ್ಯದ ಪ್ರಮುಖ ಜಲಾಶಯಗಳು ಕನಿಷ್ಠ ಮಟ್ಟ (ಡೆಡ್ ಸ್ಟೋರೇಜ್) ತಲುಪಿದ್ದು, ಮನುಷ್ಯರ ಜೀವ ಉಳಿಸಲು ಕೇವಲ ಕುಡಿಯುವ ನೀರಿಗಷ್ಟೇ ಮೊದಲ ಆದ್ಯತೆ ನೀಡಬೇಕು ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಿಭಾಗದ 7 ಜಿಲ್ಲೆಗಳಲ್ಲಿ ಜೂನ್‌ನಲ್ಲಿ ಮಳೆಯಾಗದೆ ಭೀಕರ ಬರ ಎದುರಾಗಿದೆ. ಇತಿಹಾಸದಲ್ಲೇ ಕಾಣದ ಇಂತಹ ಜಲಕ್ಷಾಮ ಎದುರಿಸಲು ಸರ್ಕಾರ ‘ಪ್ಲಾನ್ ಆಫ್ ಆ್ಯಕ್ಷನ್’ ರೂಪಿಸಿದೆ ಎಂದರು.
ತುರ್ತು ಕಾರ್ಯಕ್ಕೆ ₹5 ಕೋಟಿ ಮೀಸಲು
ಬರ ಪರಿಹಾರದ ತುರ್ತು ಅಗತ್ಯಗಳಿಗಾಗಿ ಪ್ರತಿ ಜಿಲ್ಲಾಧಿಕಾರಿಯ ಪಿಡಿ ಖಾತೆಯಲ್ಲಿ ತಲಾ 5 ಕೋಟಿ ರೂಪಾಯಿ ಹಣವನ್ನು ಕಾಯ್ದಿರಿಸಲಾಗಿದೆ. ಸದ್ಯಕ್ಕೆ ಆಕಾಶದಲ್ಲಿ ಮೋಡಗಳೇ ಇಲ್ಲದ ಕಾರಣ ಮೋಡ ಬಿತ್ತನೆ ಮಾಡುವ ಯಾವುದೇ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದೇ ವೇಳೆ ಎನ್‌ಡಿಆರ್‌ಎಫ್ ನಿಯಮಗಳ ಬದಲಾವಣೆಗೆ ಸ್ಪಂದಿಸದ ಕೇಂದ್ರ ಸರ್ಕಾರದ ವಿರುದ್ಧ ಅವರು ಅಸಮಾಧಾನ ಹೊರಹಾಕಿದರು.
ಖಾಸಗಿ ಬೋರ್‌ವೆಲ್ ಬಳಕೆಗೆ ಕ್ರಿಯಾ ಯೋಜನೆ
ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ಒಣಗುತ್ತಿರುವ ಬೋರ್‌ವೆಲ್‌ಗಳಿಗೆ ಹೈಡ್ರೋ ಫ್ರಾಕ್ಟರ್, ರೀ-ಬೋರ್ ಅಥವಾ ಹೊಸ ಬೋರ್‌ವೆಲ್ ಕೊರೆಯಲು ಕ್ರಮ ವಹಿಸಲಾಗುತ್ತಿದೆ. ಅವಶ್ಯಕತೆ ಬಿದ್ದಲ್ಲಿ ಖಾಸಗಿ ಬೋರ್‌ವೆಲ್ ಮಾಲೀಕರಿಗೆ ಹಣ ನೀಡಿ, ಅವರಿಂದ ನೀರು ಪಡೆದು ಸಾರ್ವಜನಿಕರಿಗೆ ಸರಬರಾಜು ಮಾಡಲು ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಡಿಸಿಎಂ ಭರವಸೆ ನೀಡಿದರು.



