ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿ ಈಗ ಮನೆಮನೆಯ ಮೆಚ್ಚುಗೆ ಗಳಿಸಿ, ಅಪ್ರತಿಮ ಯಶಸ್ಸು ಸಾಧಿಸಿದೆ. ರಾಯರ ಪಾತ್ರದಲ್ಲಿ ಪರೀಕ್ಷಿತ್ ಅವರ ಜೀವಂತ ನಟನೆ ಭಕ್ತರನ್ನು ಭಾವುಕರನ್ನಾಗಿಸಿದೆ. ಕಳೆದ ವಾರ ಪೂರ್ವಾಶ್ರಮದ ಪತ್ನಿ ಸರಸ್ವತಿಗೆ ಸದ್ಗತಿ ನೀಡಿದ ಸಂಚಿಕೆ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡಿತ್ತು.
ಮಾವಿನಕಾಯಿ ಸೀಕರಣೆ ಪಾತ್ರೆಗೆ ಬಿದ್ದ ಮಗು; ಕರಟಗಿರಿಯಲ್ಲಿ ರಾಯರ ಪವಾಡ!
ಮೂಲರಾಮನ ಆಜ್ಞೆಯಂತೆ ದಿವ್ಯ ಸಂಚಾರ ಹೊರಟಿರುವ ರಾಯರು, ಭುವನಗಿರಿಯ ಬಳಿಕ ಕರಟಗಿರಿಗೆ ಆಗಮಿಸುತ್ತಾರೆ. ರಾಯರ ಭಕ್ತರಾದ ಕರಟಗಿರಿಯ ದೇಸಾಯಿಯವರು ಸಕಲ ಭಕ್ಷ್ಯ ಭೋಜನಗಳೊಂದಿಗೆ ಗುರುಗಳನ್ನು ಮನೆಗೆ ಆಹ್ವಾನಿಸುತ್ತಾರೆ. ಆದರೆ, ದುರದೃಷ್ಟವಶಾತ್ ದೇಸಾಯಿಯವರ ಪುಟ್ಟ ಮಗ ಅಡುಗೆ ಮನೆಯಲ್ಲಿದ್ದ ಮಾವಿನಕಾಯಿ ಸೀಕರಣೆ ಪಾತ್ರೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ.
ದಿವ್ಯ ಪವಾಡ: ಪೂಜೆಯಲ್ಲಿದ್ದ ರಾಯರು ಜ್ಞಾನದೃಷ್ಟಿಯಿಂದ ಈ ದುರಂತವನ್ನು ಅರಿತು, ಸತ್ತ ಮಗುವನ್ನು ಪೂಜಾ ಸ್ಥಳಕ್ಕೆ ತರಿಸಿ, ತಮ್ಮ ಮಂತ್ರ ಪ್ರೋಕ್ಷಣೆಯ ಮೂಲಕ ಮರುಜೀವ ನೀಡುವ ಮಹಾ ಪವಾಡ ಈ ವಾರ ಅನಾವರಣಗೊಳ್ಳಲಿದೆ.

ಕಿರುತೆರೆಗೆ ಹಿರಿಯ ನಟ ಬಿ.ಸಿ. ಪಾಟೀಲ್ ಭರ್ಜರಿ ಎಂಟ್ರಿ!
ಈ ಭಕ್ತಿ ಪ್ರಧಾನ ಸಂಚಿಕೆಯಲ್ಲಿ ಕರಟಗಿರಿ ದೇಸಾಯಿ ಪಾತ್ರದ ಮೂಲಕ ಸ್ಯಾಂಡಲ್‌ವುಡ್ ಹಿರಿಯ ನಟ ಬಿ.ಸಿ. ಪಾಟೀಲ್ ಅವರು ಇದೇ ಮೊದಲ ಬಾರಿಗೆ ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಖ್ಯಾತ ನಟಿ ಅರುಣಾ ಬಾಲರಾಜ್ ನಟಿಸಿದ್ದಾರೆ.
ಈ ರೋಮಾಂಚನಕಾರಿ ಹಾಗೂ ಭಕ್ತಿಪೂರ್ವಕ ಸಂಚಿಕೆಗಳನ್ನು ವೀಕ್ಷಿಸಲು ಮರೆಯದಿರಿ: ‘ಶ್ರೀ ರಾಘವೇಂದ್ರ ಮಹಾತ್ಮೆ’, ಇದೇ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ.



