July 1, 2026
Wednesday, July 1, 2026
spot_img

ಕೊಡಗಿನಲ್ಲಿ ಅಕ್ರಮ ಇಸ್ಪೀಟ್ ದಂಧೆಗೆ ಬ್ರೇಕ್: ಕಾರು, ಮೊಬೈಲ್ ಸಮೇತ ಸಿಕ್ಕಿಬಿದ್ದ ಜೂಜುಕೋರರು

ಹೊಸದಿಗಂತ ಮಡಿಕೇರಿ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಗದಾಳು ಗ್ರಾಮದಲ್ಲಿ ತಡರಾತ್ರಿ ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟದ (ಇಸ್ಪೀಟ್) ಅಡ್ಡೆಯ ಮೇಲೆ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ಸರ್ಕಾರದ ಯಾವುದೇ ಅನುಮತಿಯಿಲ್ಲದೆ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದ ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಮೂಲದ 28 ಆರೋಪಿಗಳನ್ನು ಬಂಧಿಸಲಾಗಿದೆ.

ಲಕ್ಷಾಂತರ ಮೌಲ್ಯದ ಸ್ವತ್ತು ವಶಕ್ಕೆ

ಬುಧವಾರ ಮುಂಜಾನೆ 2 ಗಂಟೆಗೆ ಮಡಿಕೇರಿ ಉಪವಿಭಾಗ ಮಟ್ಟದ ಅಪರಾಧ ಪತ್ತೆ ವಿಶೇಷ ತಂಡ ಈ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಬಂಧಿತರಿಂದ 11,08,130 ರೂ. ನಗದು ಹಣ, 5 ಕಾರುಗಳು, 1 ದ್ವಿಚಕ್ರ ವಾಹನ ಹಾಗೂ 35 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ (SP) ಬಿಂದುಮಣಿ ಅವರು ಮಾಹಿತಿ ನೀಡಿದ್ದಾರೆ.

ಕಾನೂನು ಕ್ರಮ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ (KP Act) ಕಲಂ 80ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಪೊಲೀಸ್ ತಂಡಕ್ಕೆ ಎಸ್ಪಿ ಶ್ಲಾಘನೆ

ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಸೂರಜ್ ಪಿ.ಎ. ಹಾಗೂ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹೆಚ್.ವಿ. ನೇತೃತ್ವದ ಅಪರಾಧ ತನಿಖಾ ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದು, ಇಡೀ ತಂಡದ ಶ್ರಮವನ್ನು ಎಸ್ಪಿ ಬಿಂದುಮಣಿ ಅವರು ಪ್ರಶಂಸಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !