July 1, 2026
Wednesday, July 1, 2026
spot_img

ಕ್ರಿಕೆಟ್ ಲೋಕಕ್ಕೆ ಹೊಸ ಟಿ20 ಲೀಗ್ ಎಂಟ್ರಿ: ಅಶ್ವಿನ್, ಫಾಫ್ ಡು ಪ್ಲೆಸಿಸ್‌ಗೆ ಹೊಸ ಜವಾಬ್ದಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ರೋಮಾಂಚನಕಾರಿ ಟಿ20 ಲೀಗ್ ಉಡುಗೊರೆ ಸಿಗಲಿದೆ. ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ಕ್ರಿಕೆಟ್ ಮಂಡಳಿಗಳು ಜಂಟಿಯಾಗಿ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ (ETPL) ಅನ್ನು ಆಯೋಜಿಸುತ್ತಿದ್ದು, ಒಟ್ಟು 6 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಜುಲೈ 2 ರಂದು ಈ ಲೀಗ್‌ನ ಆಟಗಾರರ ಡ್ರಾಫ್ಟ್ ಪ್ರಕ್ರಿಯೆ ನಡೆಯಲಿದೆ.

ರೋಟರ್ಡ್ಯಾಮ್ ತಂಡಕ್ಕೆ ಆಫ್ರಿಕಾ ಆಟಗಾರರೇ ಮಾಲೀಕರು!

ಡಚ್ ಫ್ರಾಂಚೈಸಿಯಾದ ‘ರೋಟರ್ಡ್ಯಾಮ್ ಡಾಕರ್ಸ್‌’ ತಂಡದ ಸಹ-ಮಾಲೀಕತ್ವವನ್ನು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್, ಸ್ಟಾರ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಮತ್ತು ಜಾಂಟಿ ರೋಡ್ಸ್ ಜಂಟಿಯಾಗಿ ಹೊಂದಿದ್ದಾರೆ. ವಿಶೇಷವೆಂದರೆ, ಡು ಪ್ಲೆಸಿಸ್ ಈ ತಂಡದ ನಾಯಕರಾಗಿಯೂ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಕ್ಲಾಸೆನ್ ಜೊತೆಗೆ ಡೊನೊವನ್ ಫೆರೆರಾ ಮತ್ತು ಅನ್ರಿಚ್ ನೋಕಿಯಾ ಕೂಡ ಆಡಲಿದ್ದಾರೆ.

ಡಬ್ಲಿನ್ ತಂಡಕ್ಕೆ ಅಶ್ವಿನ್ ಕ್ಯಾಪ್ಟನ್; ಎಡಿನ್‌ಬರ್ಗ್‌ಗೆ ಕೀವಿಸ್ ಸ್ಟಾರ್ಸ್

ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಲೀಗ್‌ನಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ರಾಹುಲ್ ದ್ರಾವಿಡ್ ಮಾಲೀಕತ್ವದ ‘ಡಬ್ಲಿನ್ ಗಾರ್ಡಿಯನ್ಸ್’ ತಂಡಕ್ಕೆ ಅಶ್ವಿನ್ ಅವರನ್ನು ನಾಯಕ ಹಾಗೂ ಮಾರ್ಗದರ್ಶಕರನ್ನಾಗಿ ನೇಮಕ ಮಾಡಲಾಗಿದೆ. ಮತ್ತೊಂದೆಡೆ, ನ್ಯೂಜಿಲೆಂಡ್‌ನ ದಿಗ್ಗಜರಾದ ಟ್ರೆಂಟ್ ಬೌಲ್ಟ್ ಮತ್ತು ಮಿಚೆಲ್ ಸ್ಯಾಂಟ್ನರ್ ‘ಎಡಿನ್‌ಬರ್ಗ್ ಕ್ಯಾಸಲ್ ರಾಕರ್ಸ್‌’ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಈ ಹೊಸ ಲೀಗ್ ಜಾಗತಿಕ ಕ್ರಿಕೆಟ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !