July 1, 2026
Wednesday, July 1, 2026
spot_img

ಓವರ್‌ಟೇಕ್ ಮಾಡಲು ಹೋಗಿ ಕೃಷ್ಣಾ ನದಿಗೆ ಬಿದ್ದ ಟಿಪ್ಪರ್: ಚಾಲಕ ನಾಪತ್ತೆ, ಕ್ಲೀನರ್ ರಕ್ಷಣೆ

ಹೊಸದಿಗಂತ ವಿಜಯಪುರ:

ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿ ಸೇತುವೆಯ ಮೇಲೆ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರೊಂದನ್ನು ಓವರ್‌ಟೇಕ್ ಮಾಡಲು ಹೋದ ಟಿಪ್ಪರ್ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದು, ಚಾಲಕ ನಾಪತ್ತೆಯಾಗಿದ್ದಾರೆ.

ಕಾರಿಗೆ ಡಿಕ್ಕಿ ಹೊಡೆದು ನದಿಗೆ ಉರುಳಿದ ಲಾರಿ

ಬಾಗಲಕೋಟೆಯ ಗದ್ದನಕೇರಿ ಕ್ರಾಸ್‌ನಿಂದ ಕೊಲ್ಹಾರ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ, ಮುಂದುಗಡೆ ಹೋಗುತ್ತಿದ್ದ ಕಾರನ್ನು ಹಿಂದಿಕ್ಕಲು ಯತ್ನಿಸಿದೆ. ಈ ವೇಳೆ ಕಾರಿಗೆ ಡಿಕ್ಕಿ ಹೊಡೆದ ಟಿಪ್ಪರ್, ನಿಯಂತ್ರಣ ಕಳೆದುಕೊಂಡು ಸೇತುವೆಯ ತಡೆಗೋಡೆಯನ್ನು ಮುರಿದು ನೇರವಾಗಿ ಕೃಷ್ಣಾ ನದಿಗೆ ಉರುಳಿದೆ.

ಕ್ಲೀನರ್ ರಕ್ಷಿಸಿದ ಮೀನುಗಾರರು, ಚಾಲಕನಿಗಾಗಿ ಹುಡುಕಾಟ

ಅಪಘಾತದ ಬಳಿಕ ನದಿಯಲ್ಲಿ ಮುಳುಗುತ್ತಿದ್ದ ಟಿಪ್ಪರ್‌ನ ಮೇಲ್ಭಾಗಕ್ಕೆ ಬಂದು ಕ್ಲೀನರ್ ಸಂಜು ಮೂಲಗೆ (ಬೀದರ್ ಜಿಲ್ಲೆಯ ಯರಣಗಿ) ಜೀವಕ್ಕಾಗಿ ಕಿರುಚಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಧೈರ್ಯಶಾಲಿ ಮೀನುಗಾರರು ತಕ್ಷಣ ತೆಪ್ಪದ ಮೂಲಕ ತೆರಳಿ ಆತನನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ, ಟಿಪ್ಪರ್ ಚಾಲಕ ಸಂತೋಷ ಕೊಟೆ (ಬಾಗಲಕೋಟೆಯ ಬೆಣ್ಣೂರು) ನೀರಿನಲ್ಲಿ ನಾಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು

ಘಟನೆಯಿಂದಾಗಿ ಸೇತುವೆಯ ಮೇಲೆ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಬೀಳಗಿ ಮತ್ತು ಕೊಲ್ಹಾರ ಪೊಲೀಸರು ಅಪಘಾತಕ್ಕೀಡಾದ ಕಾರನ್ನು ತೆರವುಗೊಳಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು. ಈ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !