ಹೊಸದಿಗಂತ ಬಸವನಬಾಗೇವಾಡಿ:
ಬಿಲ್ ಮೊತ್ತ ಬಿಡುಗಡೆ ಮಾಡಲು ಗುತ್ತಿಗೆದಾರರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಬಸವನಬಾಗೇವಾಡಿ ಹೆಸ್ಕಾಂ (HESCOM) ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಅಭಿಯಂತರು (ಇಇ) ಸಿದ್ಧರಾಮ ಮಲ್ಲಿಕಾರ್ಜುನ ಬಿರಾದಾರ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಘಟನೆಯ ಹಿನ್ನೆಲೆ:
ಬಸವನಬಾಗೇವಾಡಿಯ ಗ್ರೇಡ್ 1 ಗುತ್ತಿಗೆದಾರರಾದ ಸಂತೋಷಕುಮಾರ ಹುಲಸೂರು ಅವರು ನಿರ್ವಹಿಸಿದ್ದ ನಾಲ್ಕೈದು ಕಾಮಗಾರಿಗಳ ಸುಮಾರು ಎರಡು ಲಕ್ಷ ರೂಪಾಯಿ ಬಿಲ್‌ಮೊತ್ತವನ್ನು ಮಂಜೂರು ಮಾಡಲು ಇಇ ಸಿದ್ಧರಾಮ ಬಿರಾದಾರ ಅವರು 15 ಸಾವಿರ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದರು. ಈ ಪೈಕಿ ಈಗಾಗಲೇ 5,000 ರೂಪಾಯಿಗಳನ್ನು ಪಡೆದಿದ್ದ ಅಧಿಕಾರಿ, ಬುಧವಾರ ತಮ್ಮ ಕಚೇರಿಯಲ್ಲಿ ಬಾಕಿ 10,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ರಂಗೇಹಾತಾಗಿ ಹಿಡಿದಿದ್ದಾರೆ.
ನ್ಯಾಯಾಲಯಕ್ಕೆ ಹಾಜರು:
ಈ ಭ್ರಷ್ಟಾಚಾರದ ಕುರಿತು ಬೆಂಗಳೂರಿನಲ್ಲಿ ದೂರು ದಾಖಲಾಗಿದ್ದು (ಮೊಕದ್ದಮೆ ಸಂಖ್ಯೆ: 33/26), ಆರೋಪಿ ಹೆಸ್ಕಾಂ ಇಇ ಸಿದ್ಧರಾಮ ಬಿರಾದಾರ ಅವರನ್ನು ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡ:
ಬೆಂಗಳೂರು ಲೋಕಾಯುಕ್ತ ಡಿವೈಎಸ್ಪಿಗಳಾದ ಪುಟ್ಟ ಓಬಳರೆಡ್ಡಿ ಹಾಗೂ ವಸಂತ ಅವರ ನೇತೃತ್ವದಲ್ಲಿ ಈ ಯಶಸ್ವಿ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ (ಪಿಐ) ರಾಮಪ್ಪ ಸಾವಳಗಿ, ಎಸ್.ಬಿ. ಪಾಟೀಲ, ರಾಜಶೇಖರಯ್ಯ ಹಾಗೂ ಲೋಕಾಯುಕ್ತ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದಾರೆ.



