August 24, 2026
Monday, August 24, 2026
spot_img

ಗೋವಾದಿಂದ ಮರಳುತ್ತಿದ್ದ ವೇಳೆ ಅಪಘಾತ: ಕರಾವಳಿಯ ಪ್ರಸಿದ್ಧ ಹುಲಿವೇಷ ಕಲಾವಿದ ಸ್ಥಳದಲ್ಲೇ ಸಾವು

ಹೊಸದಿಗಂತ, ಮಂಗಳೂರು:


ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೇರೂರು ಸಮೀಪ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರಾವಳಿಯ ಪ್ರಸಿದ್ಧ ಹುಲಿವೇಷ ಕಲಾವಿದ, ಉಡುಪಿಯ ಸಂತೆಕಟ್ಟೆ ಲಕ್ಷ್ಮೀನಗರ ನಿವಾಸಿ ಮಂಜುನಾಥ್ (43) ಸಾವನ್ನಪ್ಪಿದ್ದಾರೆ.


ಅವರು ಗೋವಾದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿ ಇತರ ನಾಲ್ವರೊಂದಿಗೆ ಇನ್ನೋವಾ ಕಾರಿನಲ್ಲಿ ಉಡುಪಿಗೆ ಹಿಂದಿರುಗುತ್ತಿದ್ದ ಸಂದರ್ಭ ಈ ಅವಘಡ ನಡೆದಿದೆ. ಹೇರೂರಿನ ರುಡ್‌ಸೆಟ್ ಕ್ರಾಸ್ ಸಮೀಪ ಉಡುಪಿ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಹಿಂಬದಿಯಿಂದ ಬರುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಂಜುನಾಥ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇತರ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.


ಮಂಜುನಾಥ್ ಕರಾವಳಿ ಭಾಗದ ಹೆಸರಾಂತ ಹುಲಿವೇಷ ಕಲಾವಿದರಾಗಿದ್ದು, ಹುಲಿವೇಷಧಾರಿಗಳಿಗೆ ಬಣ್ಣ ಹಚ್ಚುವುದು ಹಾಗೂ ಅಲಂಕಾರ ಮಾಡುವ ಕಲೆಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದರು. ಅವರ ಕಲಾತ್ಮಕ ಕೆಲಸಗಳು ಕರಾವಳಿಯಾದ್ಯಂತ ಜನಪ್ರಿಯವಾಗಿದ್ದು, ಅವರ ನಿಧನದಿಂದ ಕರಾವಳಿಯ ಸಾಂಸ್ಕೃತಿಕ ವಲಯಕ್ಕೆ ಅಪಾರ ನಷ್ಟ ಉಂಟಾಗಿದೆ.


ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !