ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್ ಜಾಗತಿಕ ಫ್ರಾಂಚೈಸಿ ಕ್ರಿಕೆಟ್ಗೆ ಶಾಕಿಂಗ್ ವಿದಾಯ ಘೋಷಿಸಿದ್ದಾರೆ. ಭಾರತದ ಐಪಿಎಲ್ ಹಾಗೂ ಪಾಕಿಸ್ತಾನದ ಪಿಎಸ್ಎಲ್ ಸೇರಿದಂತೆ ಯಾವುದೇ ವಿದೇಶಿ ಲೀಗ್ಗಳಲ್ಲಿ ಇನ್ಮುಂದೆ ತಾವು ಆಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸ್ವದೇಶದ ‘ದಿ ಹಂಡ್ರೆಡ್’ ಲೀಗ್ ಹೊರತುಪಡಿಸಿ ಉಳಿದೆಲ್ಲಾ ಟಿ20 ಟೂರ್ನಿಗಳಿಂದ ಅವರು ದೂರ ಉಳಿಯಲಿದ್ದಾರೆ.
ಕೋಟಿ ಹಣಕ್ಕಿಂತ ದೇಶವೇ ಮುಖ್ಯ!
“ನನಗೆ ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ ದೀರ್ಘಕಾಲ ಆಡುವುದು ಮತ್ತು ನನ್ನ ಫಿಟ್ನೆಸ್ ಕಾಯ್ದುಕೊಳ್ಳುವುದು ಮುಖ್ಯ. ಇಂಗ್ಲೆಂಡ್ ಕ್ರಿಕೆಟ್ಗೆ ನಾನು ಸಂಪೂರ್ಣ ಬದ್ಧನಾಗಿದ್ದು, ಫ್ರಾಂಚೈಸಿ ಕ್ರಿಕೆಟ್ನಿಂದ ಸಿಗುವ ಹಣಕ್ಕಿಂತ ದೇಶಕ್ಕಾಗಿ ಆಡುವುದೇ ನನಗೆ ಹೆಮ್ಮೆಯ ವಿಷಯ” ಎಂದು ಬ್ರೂಕ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಇವರು ಕಣಕ್ಕಿಳಿದಿದ್ದರು.
ಈಗಾಗಲೇ ಐಪಿಎಲ್ನಿಂದ ಬ್ಯಾನ್ ಆಗಿದ್ದ ಬ್ರೂಕ್!
ಇನ್ನೊಂದು ರೋಚಕ ವಿಷಯವೆಂದರೆ, ಹ್ಯಾರಿ ಬ್ರೂಕ್ ಮೇಲೆ ಈಗಾಗಲೇ ಐಪಿಎಲ್ನಲ್ಲಿ ಎರಡು ವರ್ಷಗಳ ನಿಷೇಧ ಹೇರಲಾಗಿದೆ. 2025ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರನ್ನು ₹6.25 ಕೋಟಿ ನೀಡಿ ಖರೀದಿಸಿತ್ತು. ಆದರೆ, ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಬ್ರೂಕ್ ಹಠಾತ್ ಹಿಂದೆ ಸರಿದಿದ್ದರು. ಬಿಸಿಸಿಐ ನಿಯಮಾವಳಿಗಳ ಪ್ರಕಾರ, ಹರಾಜಿನಲ್ಲಿ ಆಯ್ಕೆಯಾದ ಬಳಿಕ ಹಿಂದೆ ಸರಿದಿದ್ದಕ್ಕೆ ಅವರಿಗೆ 2 ವರ್ಷ ನಿಷೇಧ ವಿಧಿಸಲಾಗಿದ್ದು, 2027ರ ಐಪಿಎಲ್ ಮಿನಿ ಹರಾಜಿನಲ್ಲೂ ಅವರು ಭಾಗವಹಿಸುವಂತಿರಲಿಲ್ಲ. ಇದೀಗ ಅವರೇ ಅಧಿಕೃತವಾಗಿ ಎಲ್ಲಾ ಲೀಗ್ಗಳಿಂದ ಹೊರನಡೆದಿದ್ದಾರೆ.



