ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಹಿರಿಯ ನಿರ್ದೇಶಕ ಹಾಗೂ ನಟಿ ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಇನ್ಮುಂದೆ ತಾವು ಎಂದಿಗೂ ನಿರ್ದೇಶಕನ ಕ್ಯಾಪ್ ತೊಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಅರ್ಥ್’, ‘ಸಾರಂಶ್’, ‘ನಾಮ್’ ಹಾಗೂ ‘ಸಡಕ್’ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಅವರು, ಐದು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 50 ಕ್ಕೂ ಹೆಚ್ಚು ಚಿತ್ರಗಳನ್ನು ಮುನ್ನಡೆಸಿದ್ದಾರೆ.
ಇಂದಿನ ಸಿನಿಮಾ ಮಾರುಕಟ್ಟೆ ಬಗ್ಗೆ ಬೇಸರ
ಇಂದಿನ ಸಿನಿಮಾ ತಯಾರಿಕಾ ಶೈಲಿ ಸಂಪೂರ್ಣ ಬದಲಾಗಿದೆ ಎಂದು ಮಹೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ. “ಈಗಿನ ಸಿನಿಮಾಗಳು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಸಿದ್ಧವಾಗುತ್ತಿವೆ. ಬರವಣಿಗೆ ಆರಂಭಿಸುವ ಮುನ್ನವೇ ಕಥೆ ಮತ್ತು ಕಂಟೆಂಟ್ ಹೀಗೇ ಇರಬೇಕೆಂದು ಫಿಕ್ಸ್ ಮಾಡಲಾಗುತ್ತದೆ. ಇದರಿಂದಾಗಿ ನಿರ್ದೇಶಕರಿಗೆ ತಮ್ಮ ಸ್ವಂತ ಕಲ್ಪನೆ ಅಥವಾ ಸ್ವಾತಂತ್ರ್ಯ ಬಳಸಲು ಅವಕಾಶವೇ ಇಲ್ಲದಂತಾಗಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಯುವ ಪ್ರತಿಭೆಗಳಿಗೆ ಮೆಂಟರ್ ಆಗುವ ಆಸೆ
1999 ರ ‘ಕಾರ್ತೂಸ್’ ಚಿತ್ರದ ನಂತರ ನಿರ್ದೇಶನದಿಂದ ದೂರವಿದ್ದ ಅವರು, 2020 ರಲ್ಲಿ ‘ಸಡಕ್ 2’ ಮೂಲಕ ಕಮ್‌ಬ್ಯಾಕ್ ಮಾಡಿದ್ದರು. ಆದರೆ, ಸದ್ಯದ ಜೀವನದ ಘಟ್ಟದಲ್ಲಿ ತಮಗಾಗಿ ಸಿನಿಮಾ ಮಾಡುವುದಕ್ಕಿಂತ ಇತರರ ಯಶಸ್ಸಿಗೆ ಕಾರಣವಾಗುವುದು ತಮಗೆ ಇಷ್ಟ ಎಂದಿದ್ದಾರೆ. ಇನ್ಮುಂದೆ ಸಿನಿಮಾ ನಿರ್ದೇಶಿಸದೆ, ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಬಯಸುವುದಾಗಿ ಅವರು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.



