ಹೊಸದಿಗಂತ ವರದಿ ಶಿರಸಿ:
ನಗರದ ಮುಸ್ಲಿಂ ಗಲ್ಲಿಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, ಸಾಗಾಟಕ್ಕೆ ಬಳಸಿದ್ದ ಕ್ರೆಟಾ ಕಾರು ಹಾಗೂ ಸುಮಾರು 57 ಕೆಜಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಶಿರಸಿ ಸಿಪಿಐ ಸಂಪತ್ ಕುಮಾರ್ ಅವರ ನೇತೃತ್ವದ ತಂಡವು ಇಂದು ಬೆಳಿಗ್ಗೆ ಈ ಕಾರ್ಯಾಚರಣೆ ನಡೆಸಿದೆ. ಜಪ್ತಿ ಮಾಡಿದ ಮಾಂಸ ಮತ್ತು ಕಾರಿನ ಮೌಲ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಅಕ್ಕಿಆಲೂರಿನಲ್ಲಿರುವ ಇತರ ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚಿಸಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಹಾಗೂ ಶಿರಸಿ ಡಿಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಸಂಪತ್ ಕುಮಾರ್, ಸಿಬ್ಬಂದಿಯಾದ ಗುರುರಾಜ್, ರಾಮದೇವ್, ಅಶೋಕ್, ಮಹದೇವ್ ಮತ್ತು ಶಿವಾನಂದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



