ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸ್ವಂತ ವಾಹನಗಳಲ್ಲಿ ಹೋಗುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿ ಮಹತ್ವದ ಸೂಚನೆ ನೀಡಿದೆ. ಬೆಟ್ಟದ ಮೇಲಿನ ಆಧ್ಯಾತ್ಮಿಕ ವಾತಾವರಣ ಕಾಪಾಡಲು ಮತ್ತು ಶಬ್ದ ಮಾಲಿನ್ಯ ತಡೆಯಲು ಇನ್ಮುಂದೆ ಹಾರ್ನ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಏನಿದು ‘ಸೈಲೆಂಟ್ ತಿರುಮಲ ಇನಿಶಿಯೇಟಿವ್’?
ಏಳುಬೆಟ್ಟಗಳ ಮೇಲೆ ಕೇವಲ ಗೋವಿಂದ ನಾಮಸ್ಮರಣೆ ಮಾತ್ರ ಕೇಳಿಸಬೇಕು ಎಂಬ ಉದ್ದೇಶದಿಂದ ಟಿಟಿಡಿ ‘ಸೈಲೆಂಟ್ ತಿರುಮಲ ಇನಿಶಿಯೇಟಿವ್’ (Silent Tirumala Initiative) ಎಂಬ ವಿಶೇಷ ಅಭಿಯಾನ ಆರಂಭಿಸಿದೆ. ಇದರ ಪ್ರಕಾರ, ತಿರುಮಲ ಘಾಟ್ ರಸ್ತೆ ಹಾಗೂ ಬೆಟ್ಟದ ಮೇಲಿನ ಯಾವುದೇ ರಸ್ತೆಗಳಲ್ಲಿ ವಾಹನ ಚಾಲಕರು ಹಾರ್ನ್ ಬಳಸುವಂತಿಲ್ಲ. ಭಕ್ತರ ಜಾಗೃತಿಗಾಗಿ ರಸ್ತೆಗಳ ಉದ್ದಕ್ಕೂ ಮಾಹಿತಿ ಬೋರ್ಡ್‌ಗಳನ್ನು ಹಾಕಲಾಗಿದೆ.
ವಿಐಪಿ ವಾಹನಗಳಿಗೂ ನಿಯಮ ಕಡ್ಡಾಯ!
ಈ ಹೊಸ ನಿಯಮ ಕೇವಲ ಸಾಮಾನ್ಯ ಭಕ್ತರಿಗೆ ಮಾತ್ರವಲ್ಲ, ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಸೈರನ್ ಬಳಸುವ ವಿಐಪಿ (VIP) ವಾಹನಗಳು ಕೇವಲ ತುರ್ತು ಪರಿಸ್ಥಿತಿಗಳಲ್ಲಿ (Emergency) ಮಾತ್ರ ಹಾರ್ನ್ ಬಳಸಬಹುದು. ಉಳಿದಂತೆ ಕಡ್ಡಾಯವಾಗಿ ಹಾರ್ನ್ ಆಫ್ ಮಾಡಿರಬೇಕು ಎಂದು ಅಧಿಕಾರಿಗಳು ಖಡಕ್ ಆಗಿ ತಿಳಿಸಿದ್ದಾರೆ. ಹಾಗಾಗಿ, ತಿರುಪತಿಗೆ ಹೋಗುವ ಮುನ್ನ ಈ ನಿಯಮ ನೆನಪಿರಲಿ.



