ಸಂಜೆಯಾಗುತ್ತಲೇ ಮಕ್ಕಳು ಚಿಪ್ಸ್, ಕುರ್ಕುರೆ ಎಂದು ಜಂಕ್ ಫುಡ್ ಕೇಳುತ್ತಿದ್ದಾರಾ? ಇನ್ಮುಂದೆ ಚಿಂತೆ ಬೇಡ̤ ಮೈದಾ, ಬಿಳಿ ಸಕ್ಕರೆ ಮತ್ತು ಪ್ರಿಸರ್ವೇಟಿವ್ಸ್‌ಗಳ ಕಾಟವಿಲ್ಲದೆ, ನೂರಕ್ಕೆ ನೂರು ಆರೋಗ್ಯಕರವಾಗಿ ಮನೆಯಲ್ಲೇ ಮಾಡಬಹುದಾದ ಸೂಪರ್ ಸ್ನಾಕ್ ಇಲ್ಲಿದೆ. ರಾಗಿಯ ಕ್ಯಾಲ್ಸಿಯಂ, ಬೆಲ್ಲದ ಕಬ್ಬಿಣದಂಶ ಮತ್ತು ಶುದ್ಧ ತುಪ್ಪದ ಕಂಪು ಹೊಂದಿರುವ ಈ ಗರಿಗರಿ ಬಿಸ್ಕೆಟ್, ಇಡೀ ಕುಟುಂಬದ ಆರೋಗ್ಯ ಕಾಯುವ ಅತ್ಯುತ್ತಮ ಚಾಯ್ಸ್.
ಬೇಕಾಗುವ ಸಾಮಗ್ರಿಗಳು
ರಾಗಿ ಹಿಟ್ಟು
ಗೋಧಿ ಹಿಟ್ಟು
ಬೆಲ್ಲದ ಪುಡಿ
ತುಪ್ಪ ಅಥವಾ ಬೆಣ್ಣೆ
ಏಲಕ್ಕಿ ಪುಡಿ
ಹಾಲು
ಬೇಕಿಂಗ್ ಪೌಡರ್
ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ತುಪ್ಪ ಮತ್ತು ಬೆಲ್ಲದ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿದ ನಂತರ ರಾಗಿ ಹಿಟ್ಟು, ಗೋಧಿ ಹಿಟ್ಟು, ಬೇಕಿಂಗ್ ಪೌಡರ್ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಕೈಯಿಂದ ಮೃದುವಾಗಿ ಎಲ್ಲವನ್ನೂ ಮಿಶ್ರಣ ಮಾಡಿ. ಹಿಟ್ಟು ಉಂಡೆ ಕಟ್ಟಲು ಬಾರದಿದ್ದರೆ ಮಾತ್ರ 2 ಚಮಚ ಹಾಲು ಹಾಕಿ ಮೃದುವಾಗಿ ಕಲಸಿ. ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಅಂಗೈಯಲ್ಲಿ ಲಘುವಾಗಿ ಒತ್ತಿ ಬಿಸ್ಕೆಟ್ ಆಕಾರ ನೀಡಿ. ಬೇಕಿದ್ದರೆ ಮೇಲ್ಭಾಗದಲ್ಲಿ ಚಾಕುವಿನಿಂದ ಲೈಟ್ ಆಗಿ ಗೆರೆ ಎಳೆಯಬಹುದು.
ನಂತರ ಗ್ಯಾಸ್ ಒಲೆಯ ಮೇಲೆ ಒಂದು ದೊಡ್ಡ ಕುಕ್ಕರ್ ಇಟ್ಟು, ಅದರ ತಳಕ್ಕೆ 1 ಕಪ್ ಉಪ್ಪು ಅಥವಾ ಮರಳು ಹಾಕಿ. ಅದರ ಮೇಲೆ ಒಂದು ಸಣ್ಣ ಸ್ಟ್ಯಾಂಡ್ ಇಟ್ಟು, ಕುಕ್ಕರ್ ಮುಚ್ಚಳದ ವಿಸಿಲ್ ಮತ್ತು ಗ್ಯಾಸ್ಕೆಟ್ ತೆಗೆಯಬೇಯಬೇಕು. ಮುಚ್ಚಳ ಮುಚ್ಚಿ 10 ನಿಮಿಷ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಒಂದು ಸ್ಟೀಲ್ ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ಮಾಡಿಟ್ಟುಕೊಂಡ ಬಿಸ್ಕೆಟ್ ಇಟ್ಟು ತಟ್ಟೆಯನ್ನು ಜಾಗರೂಕತೆಯಿಂದ ಕುಕ್ಕರ್ ಒಳಗಿರುವ ಸ್ಟ್ಯಾಂಡ್ ಮೇಲೆ ಇಟ್ಟು ಮುಚ್ಚಳ ಮುಚ್ಚ ಬೇಕು. ಸಣ್ಣ ಉರಿಯಲ್ಲಿ ನಂತರ 15 ರಿಂದ 20 ನಿಮಿಷ ಬೇಕ್ ಮಾಡಿದರೆ ಗರಿಗರಿ ರಾಗಿ ಬಿಸ್ಕೆಟ್ ಸಿದ್ಧ.



