July 2, 2026
Thursday, July 2, 2026
spot_img

‘ಕೆಲಸ ಮುಗಿಸಿ, ಹಣ ಪಡ್ಕೊಳಿ’: ಜಲಜೀವನ್ ಗುತ್ತಿಗೆದಾರರಿಗೆ ಜಿ.ಪಂ. ಸಿಇಒ ಖಡಕ್ ಸಂದೇಶ

ಹೊಸದಿಗಂತ ವರದಿ ​ಚಿತ್ರದುರ್ಗ:

ಜಲಜೀವನ್ ಮಿಷನ್ ಕಾಮಗಾರಿ ವಿಳಂಬಕ್ಕೆ ವಿಧಿಸಲಾಗುವ ಶೇ.10 ರಷ್ಟು ದಂಡಕ್ಕೆ ವಿನಾಯಿತಿ ನೀಡಲಾಗುವುದು. ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರು ಮುಂದೆ ಬಂದು ಕೆಲಸ ಮುಗಿಸಿಕೊಟ್ಟರೆ, ಕಾಮಗಾರಿ ನಿಗದಿಪಡಿಸಿದ ಪೂರ್ಣ ಹಣವನ್ನು ಅವರಿಗೆ ಪಾವತಿ ಮಾಡಲಾಗುವುದು ಎಂದು ಜಿ.ಪಂ.ಸಿಇಓ ಡಾ.ಎಸ್.ಆಕಾಶ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಂಡ ವಿನಾಯಿತಿ ನೀಡಿದರೆ ಶೇ.80 ರಷ್ಟು ಗುತ್ತಿಗೆದಾರು ಜಲಜೀವನ್ ಮಿಷನ್ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದೆ ಬರುತ್ತಾರೆ, ಎಂದು ಸಹಾಯಕ ಕಾರ್ಯಪಾಲಕ ಹಾಗೂ ಕಿರಿಯ ಅಭಿಯಂತರರು ಸಲಹೆ ನೀಡಿದ್ದಾರೆ. ಇದರ ಆಧಾರದಲ್ಲಿ ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರನ್ನು ಹೊರತು ಪಡಿಸಿ, ಉಳಿದವರಿಗೆ ದಂಡ ವಿನಾಯಿತಿ ನೀಡಲಾಗುವುದು. ಈ ಕುರಿತು ಜುಲೈ ೮ ರೊಳಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕಾಮಗಾರಿ ಪೂರ್ಣಗೊಳಿಸಲು ಮನ ಒಲಿಸಬೇಕು. ಇದಕ್ಕೆ ಒಪ್ಪುವವರ ಪಟ್ಟಿ ಸಿದ್ದಪಡಿಸಿ, ತಾಲ್ಲೂಕುವಾರು ಗುತ್ತಿಗೆದಾರರನ್ನು ಖುದ್ದು ಭೇಟಿ ಮಾಡಿ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಕಳಪೆ ಕಾಮಗಾರಿ ಗುತ್ತಿಗೆದಾರರಿಂದ ದಂಡ ವಸೂಲಿ :

ಕಳಪೆ ಎಂದು ಗುರುತಿಸಲ್ಪಟ್ಟ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ತಹಶೀಲ್ದಾರ್, ಇಓ ಹಾಗೂ ಇಂಜಿನಿಯರ್ ತಂಡ ರಚಿಸಲಾಗಿತ್ತು. ಈ ತಂಡ ವರದಿ ನೀಡಿದ್ದು, ಕಾಮಗಾರಿ ಅನುಷ್ಟಾನದಲ್ಲಿ ಲೋಪ ಎಸಗಿದ ಗುತ್ತಿದಾರರಿಗೆ ದಂಡ ವಿಧಿಸಿ, ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಯಾವುದೇ ಮುಲಾಜು ತೋರದೆ ದಂಡ ವಸೂಲಿ ಮಾಡುವುದಾಗಿ ಜಿ.ಪಂ. ಸಿಇಓ ಡಾ.ಆಕಾಶ್ ಈ ಸಂದರ್ಭದಲ್ಲಿ ತಿಳಿಸಿದರು.

ಹರ್ ಘರ್ ಜಲ್ ಘೋಷಣೆಗೆ ಗಡುವು :

ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡಿಸಿದ ಜಿ.ಪಂ.ಸಿಇಓ ಡಾ.ಎಸ್.ಆಕಾಶ್, ಕಾಮಗಾರಿಗಳು ಪೂರ್ಣಗೊಂಡಿದ್ದರು, ಹರ್ ಘರ್ ಜಲ್ ಘೋಷಣೆಯನ್ನು ಮಾಡದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಪ್ರತಿ ಗ್ರಾಮವಾರು ಮನೆಗಳ ನಿಖರವಾದ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜುಲೈ ೧೦ನೇ ತಾರೀಖಿನೊಳಗೆ ಜಿಲ್ಲೆಯಲ್ಲಿ ಎಷ್ಟು ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನೀರು ಒದಗಿಸಲು ಸಾಧ್ಯವಿದೆ ಎಂಬ ನಿಖರವಾದ ವರದಿ ಸಲ್ಲಿಸಬೇಕು. ಆರು ತಾಲೂಕುಗಳಲ್ಲಿ ವಾರಕ್ಕೆ ತಲಾ ೧೦ ರಂತೆ ಕಾಮಗಾರಿಗಳ ಅಂತಿಮ ಕೆಲಸಗಳನ್ನು ಪೂರ್ಣಗೊಳಿಸಿ ಪ್ರತಿ ತಿಂಗಳು ೨೪೦ ಗ್ರಾಮಗಳಲ್ಲಿ ಹರ್ ಘರ್ ಜಲ್ ಘೋಷಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿ.ಪಂ. ಉಪಕಾರ್ಯದರ್ಶಿ ಬಾಬು, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್, ಜಿ.ಪಂ.ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಕಾರ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಅಭಿನವ್, ಜಲತಜ್ಞ ದೇವರಾಜರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !