ಹೊಸದಿಗಂತ ವರದಿ ಬೆಳಗಾವಿ:
ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಸಿಸಿಬಿ (ಅಪರಾಧ ವಿಭಾಗ) ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಗೆ ಮತ್ತೊಂದು ಮಹತ್ವದ ಯಶಸ್ಸು ಲಭಿಸಿದೆ.
ಕೆಎಸ್ಆರ್ಟಿಸಿ ಹಳೆ ಬಸ್ ನಿಲ್ದಾಣದ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸುಮಾರು ₹9 ಲಕ್ಷ ಮೌಲ್ಯದ ಹೆರಾಯಿನ್ ಸೇರಿದಂತೆ ಮೊಬೈಲ್ ಫೋನ್ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ನಗರದ ಗಂಗಾಧರ ನಗರದ ನಿವಾಸಿ ರಾಘವೇಂದ್ರ ಗೋಪಾಲ ಮುರ್ಕಟನಾಳ (36) ಎಂದು ಗುರುತಿಸಲಾಗಿದೆ. ಪೊಲೀಸರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ನಾಯಕ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ನಗರದ ಕೆಎಸ್ಆರ್ಟಿಸಿ ಹಳೆ ಪಾರ್ಕಿಂಗ್ ಪ್ರದೇಶದ ಇಂದಿರಾ ಕ್ಯಾಂಟೀನ್ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಯು ಗ್ರಾಹಕರಿಗಾಗಿ ಕಾಯುತ್ತಿದ್ದು, ಯುವಕರಿಗೆ ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಆತನನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿದರು.ತಪಾಸಣೆ ವೇಳೆ ಆರೋಪಿಯ ಬಳಿ 45.18 ಗ್ರಾಂ ಹೆರಾಯಿನ್ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹9 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:
ಅಲ್ಲದೆ ಒಂದು ರೆಡ್ಮಿ ಮೊಬೈಲ್ ಫೋನ್ ಹಾಗೂ ನಗದು ಹಣವನ್ನೂ ವಶಪಡಿಸಿಕೊಳ್ಳಲಾಗಿದೆ. ಜಪ್ತಿಯಾದ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ ₹9,00,500 ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಹೆರಾಯಿನ್ ಎಲ್ಲಿಂದ ಪೂರೈಕೆಯಾಗಿತ್ತು, ಇದರ ಹಿಂದೆ ಕಾರ್ಯನಿರ್ವಹಿಸುತ್ತಿರುವ ಜಾಲ ಯಾವುದು, ನಗರದಲ್ಲಿ ಯಾರಿಗೆ ಈ ಮಾದಕ ವಸ್ತು ಪೂರೈಕೆ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಕುರಿತು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಸಂಬಂಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಇಂತಹ ವಿಶೇಷ ಕಾರ್ಯಾಚರಣೆಗಳನ್ನು ಮುಂದಿನ ದಿನಗಳಲ್ಲೂ ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ಡ್ರಗ್ಸ್ ಜಾಲದ ವಿರುದ್ಧ ಪೊಲೀಸ್ ಇಲಾಖೆ ನಿರಂತರ ದಾಳಿ ನಡೆಸುತ್ತಿದ್ದು, ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ನಗರವನ್ನು ಡ್ರಗ್ಸ್ ಮುಕ್ತಗೊಳಿಸಲು ವಿಶೇಷ ಒತ್ತು ನೀಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.



