October 21, 2026
Wednesday, October 21, 2026
spot_img

150 ವರುಷಗಳ ಟೆಸ್ಟ್ ಇತಿಹಾಸದಲ್ಲೇ ಮೊದಲು: ಹೊಸ ಚರಿತ್ರೆ ಸೃಷ್ಟಿಸಿದ ಸೌತ್ ಆಫ್ರಿಕಾ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಸ್ಟ್ ಕ್ರಿಕೆಟ್‌ನ 150 ವರುಷಗಳ ಸುದೀರ್ಘ ಇತಿಹಾಸದಲ್ಲೇ ಮುಂಚೆಂದು ಕಾಣದ, ಯಾರೂ ಊಹಿಸಿರದ ಅಪರೂಪದ ಮಹಾ ದಾಖಲೆಯೊಂದಕ್ಕೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಲೆಕ್ಕಾಚಾರ ಆರಂಭದಲ್ಲೇ ಸರಿಯಾಗಿತ್ತು. ಆಸೀಸ್ ವೇಗಿಗಳ ಮಾರಕ ದಾಳಿಗೆ ತಲೆಯುರುಳಿಸಿದ ಸೌತ್ ಆಫ್ರಿಕಾ, ಕೇವಲ 110 ರನ್ ಗಳಿಸುವಷ್ಟರಲ್ಲಿ ತನ್ನ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡು ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿತ್ತು.

ತಂಡವು ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ನಾಯಕ ಟೆಂಬಾ ಬವುಮಾ, ಆಸೀಸ್ ಪಡೆಗೆ ಕೋಟೆಯಂತೆ ಅಡ್ಡನಿಂತರು. ಜವಾಬ್ದಾರಿಯುತ ಆಟವಾಡಿದ ಅವರು 179 ರನ್‌ಗಳ ಅದ್ಭುತ ಶತಕ ಸಿಡಿಸಿದರು. ಇವರಿಗೆ ಕೆಳಕ್ರಮಾಂಕದಲ್ಲಿ ಸೈಮನ್ ಹಾರ್ಮರ್ (82) ಮತ್ತು ಮಾರ್ಕೊ ಯಾನ್ಸೆನ್ (85) ಸಾಥ್ ನೀಡಿದರು. ಬವುಮಾ-ಹಾರ್ಮರ್ ಜೋಡಿ 8ನೇ ವಿಕೆಟ್‌ಗೆ 183 ರನ್ ಸೇರಿಸಿ ಸೌತ್ ಆಫ್ರಿಕಾವನ್ನು ಸುರಕ್ಷಿತ ದಡಕ್ಕೆ ಮುಟ್ಟಿಸಿತು.

ಸೌತ್ ಆಫ್ರಿಕಾ 9 ವಿಕೆಟ್ ನಷ್ಟಕ್ಕೆ 425 ರನ್ ಕಲೆಹಾಕಿದ್ದಾಗ ದಿಢೀರ್ ‘ಇನ್ನಿಂಗ್ಸ್ ಡಿಕ್ಲೇರ್’ ಘೋಷಿಸಿತು. ಟೆಸ್ಟ್ ಇತಿಹಾಸದಲ್ಲಿ ಕೇವಲ 110 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ನಂತರವೂ, 400ಕ್ಕೂ ಹೆಚ್ಚು ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡ ಉದಾಹರಣೆಯೇ ಇಲ್ಲ.

2010ರಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ್ ವಿರುದ್ಧ 102 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು 446 ರನ್ ಚೇತರಿಸಿಕೊಂಡಿತ್ತಾದರೂ, ಆ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಗಿತ್ತು. ಆದರೆ, ಸೌತ್ ಆಫ್ರಿಕಾ ಆಲೌಟ್ ಆಗದೆ ಧೈರ್ಯವಾಗಿ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಮಹಾ ಕುಸಿತದ ಬಳಿಕ ಡಿಕ್ಲರೇಷನ್ ಎಂಬ ಅಪರೂಪದ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

Must Read