ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿನ ಬಿಕ್ಕಟ್ಟು ಭೀಕರ ಹಂತ ತಲುಪಿದ್ದು, ಮಮತಾ ಬ್ಯಾನರ್ಜಿ ವಿರುದ್ಧ ಬಂಡಾಯವೆದ್ದಿರುವ ಶಾಸಕರು ಕೋಲ್ಕತ್ತಾದ ಪ್ರಧಾನ ಕಚೇರಿ ‘ತೃಣಮೂಲ ಭವನ’ವನ್ನು ತಮ್ಮ ವಶಕ್ಕೆ ಪಡೆದು ಬೀಗ ಜಡಿದಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಮುಂದೆ ಪಕ್ಷದ ಹೆಸರು ಮತ್ತು ಚಿಹ್ನೆಗೆ ಹಕ್ಕು ಮಂಡಿಸಿದ ಬೆನ್ನಲ್ಲೇ ಈ ಹೈಡ್ರಾಮಾ ನಡೆದಿದೆ.
ದೆಹಲಿಯಿಂದ ಬಂದ ತಕ್ಷಣವೇ ಕಚೇರಿಗೆ ಬೀಗ!
ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿದ್ದ ಬಂಡಾಯ ನಾಯಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಹಿರಿಯ ನಾಯಕ ಫಿರ್ಹಾದ್ ಹಕೀಮ್ ಜಂಟಿಯಾಗಿ ಕೋಲ್ಕತ್ತಾಕ್ಕೆ ಮರಳಿದ ತಕ್ಷಣವೇ ಈ ಹೈಡ್ರಾಮಾ ನಡೆದಿದೆ. ರೆಬೆಲ್ ಶಾಸಕರು ಮತ್ತು ನಾಯಕರು ಸೀಧಾ ಪ್ರಧಾನ ಕಚೇರಿಗೆ ನುಗ್ಗಿ ಅಲ್ಲಿ ಪ್ರಮುಖ ಸಭೆ ನಡೆಸಿದರು. ತದನಂತರ ಕಚೇರಿಯ ಮುಖ್ಯ ಗೇಟ್‌ಗಳಿಗೆ ಬೀಗ ಜಡಿದು ತಮ್ಮ ಹಿಡಿತ ಸಾಧಿಸಿದರು.
ಅಷ್ಟೇ ಅಲ್ಲದೆ, ಕಚೇರಿಯ ಮುಂಭಾಗದಲ್ಲಿ “ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್” ಹೆಸರಿನ ಹೊಸ ಬ್ಯಾನರ್ ಅಳವಡಿಸಲಾಗಿದ್ದು, ಮಮತಾ ಬ್ಯಾನರ್ಜಿ ಬದಲು ಅರೂಪ್ ರಾಯ್‌ನನ್ನು ಪಕ್ಷದ ನೂತನ ಅಧ್ಯಕ್ಷರೆಂದು ಘೋಷಿಸಲಾಗಿದೆ. ತಾವು ಈ ಕಟ್ಟಡದ ಮಾಲೀಕರೊಂದಿಗೆ ಕಾನೂನಾತ್ಮಕ ಒಪ್ಪಂದಗಳನ್ನು ಪೂರ್ಣಗೊಳಿಸಿದ್ದು, ಇನ್ನು ಮುಂದೆ ತಾವೇ ಇಲ್ಲಿಂದ ಅಧಿಕೃತವಾಗಿ ಕಾರ್ಯನಿರ್ವಹಿಸುವುದಾಗಿ ಬಂಡಾಯ ನಾಯಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:
ಚುನಾವಣಾ ಆಯೋಗದ ಮೆಟ್ಟಿಲೇರಿದ ‘ಅಸಲಿ ಟಿಎಂಸಿ’ ಜಗಳ
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಭಾರಿ ಸೋಲಿನ ಬಳಿಕ ಟಿಎಂಸಿ ಪಕ್ಷವು ಎರಡು ಹೋಳಾಗಿದೆ. ರಿತಬ್ರತಾ ಬ್ಯಾನರ್ಜಿ ತಮ್ಮ ಪರವಾಗಿ ಒಟ್ಟು 65 ಶಾಸಕರ ಬಲ ಇರುವುದಾಗಿ ಕ್ಲೈಮ್ ಮಾಡಿದ್ದಾರೆ. ಕಚೇರಿ ವಶಪಡಿಸಿಕೊಳ್ಳುವ ಕೇವಲ ಒಂದು ದಿನದ ಮುಂಚೆ, ಬಂಡಾಯ ಬಣವು ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಪೂರ್ಣ ಪೀಠವನ್ನು ಭೇಟಿಯಾಗಿತ್ತು. ತಾವೇ ‘ಅಸಲಿ ಟಿಎಂಸಿ’ ಎಂದು ವಾದಿಸಿರುವ ಅವರು, ಪಕ್ಷದ ಹೆಸರು ಮತ್ತು ಅಧಿಕೃತ ‘ಜೋಡಿ ಹೂವಿನ’ ಚಿಹ್ನೆಯನ್ನು ತಮಗೇ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಎರಡೂ ಬಣಗಳಿಗೆ ನೋಟಿಸ್ ನೀಡಿರುವ ಚುನಾವಣಾ ಆಯೋಗವು, ಅಗತ್ಯ ದಾಖಲೆಗಳನ್ನು ಸಲ್ಲಿಸಲು ಜುಲೈ 6ರ ಸಂಜೆ 5:30ರ ವರೆಗೆ ಗಡುವು ನೀಡಿದೆ. ನಂತರ ಜುಲೈ 6ರ ಸೋಮವಾರದಂದು ಅಂತಿಮ ವಿಚಾರಣೆ ನಡೆಯಲಿದೆ.



