September 19, 2026
Saturday, September 19, 2026
spot_img

ಭಾರತೀಯ ಸೇನೆಗೆ ಸಿಗಲಿದೆ ‘ಕಮಿಕಾಜೆ’ ಡ್ರೋನ್ ಬಲ: 52 ಸಾವಿರ ಕೋಟಿ ಮೌಲ್ಯದ ಕ್ಷಿಪಣಿ ಖರೀದಿಗೆ ಒಪ್ಪಿಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 52,000 ಕೋಟಿ ಮೊತ್ತದ ಬೃಹತ್ ರಕ್ಷಣಾ ಖರೀದಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ (DAC) ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೆಚ್ಚಿನ ಒತ್ತು ನೀಡಿ, ಈ ಎಲ್ಲಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ಉತ್ಪಾದಿಸಲು ಒಪ್ಪಿಗೆ ನೀಡಲಾಗಿದೆ.

ಮೂರೂ ಸೇನಾ ಪಡೆಗಳಿಗೆ ಸಿಗಲಿರುವ ಅತ್ಯಾಧುನಿಕ ಆಯುಧಗಳು

ಶತ್ರುಗಳ ನೆಲೆಗಳನ್ನು ಗುರುತಿಸಿ, ತಾವೇ ಸ್ವತಃ ಹೋಗಿ ಅಪ್ಪಳಿಸಿ ನಾಶಮಾಡುವ ಜೆಟ್ ಆಧಾರಿತ ಅತ್ಯಾಧುನಿಕ ಡ್ರೋನ್ ವ್ಯವಸ್ಥೆ ಇದಾಗಿದೆ. ಶತ್ರುಗಳ ಯುದ್ಧ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸುವ ‘ಮ್ಯಾನ್ ಪೋರ್ಟಬಲ್ ಆಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್’ ಮತ್ತು ಮೇಲ್ಮೈನಿಂದ ಆಕಾಶಕ್ಕೆ ಚಿಮ್ಮುವ ಮಧ್ಯಮ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲಾಗುತ್ತಿದೆ.

ಶತ್ರುಗಳ ಡ್ರೋನ್‌ ದಾಳಿಗಳನ್ನು ತಡೆಯಲು ‘ಆಕಾಶ್ ತರಂಗ್’ ವ್ಯವಸ್ಥೆ ಹಾಗೂ ಅತ್ಯಂತ ಕಡಿಮೆ ದೂರದ ವಾಯು ರಕ್ಷಣಾ ವ್ಯವಸ್ಥೆಯಾದ ‘ವಿ-ಶೋರಾಡ್ಸ್’ ಖರೀದಿಗೆ ಹಸಿರು ನಿಶಾನೆ ಸಿಕ್ಕಿದೆ.

ನೌಕಾಸೇನೆ ಮತ್ತು ವಾಯುಸೇನೆಯ ಕಣ್ಗಾವಲು ಸುಧಾರಣೆ

ಸಮುದ್ರದ ಮೇಲೆ ಕಣ್ಣಿಡಲು ಸುಧಾರಿತ ಸೆನ್ಸಾರ್‌ಗಳಿರುವ ಡ್ರೋನ್‌ಗಳು ಮತ್ತು ಅತ್ಯಾಧುನಿಕ ಮೈನ್‌ಗಳನ್ನು ಸೇನೆಗೆ ಸೇರಿಸಲಾಗುತ್ತಿದೆ. ಗಡಿ ಭಾಗಗಳಲ್ಲಿ ಅತ್ಯಂತ ಎತ್ತರದಿಂದ ನಿರಂತರವಾಗಿ ನಿಗಾ ಇಡಲು ಮತ್ತು ದೂರಸಂಪರ್ಕ ಸಾಮರ್ಥ್ಯವನ್ನು ಹೆಚ್ಚಿಸಲು ‘ಹೈ ಆಲ್ಟಿಟ್ಯೂಡ್ ಸೂಡೊ ಸ್ಯಾಟಲೈಟ್’ ತಂತ್ರಜ್ಞಾನವನ್ನು ತರಲಾಗುತ್ತಿದೆ. ಗಡಿ ನಿಯಂತ್ರಣ ರೇಖೆ ಮತ್ತು ನೈಜ ನಿಯಂತ್ರಣ ರೇಖೆ (LAC) ಬಳಿ ಚೀನಾ-ಪಾಕಿಸ್ತಾನದ ಸವಾಲುಗಳನ್ನು ಎದುರಿಸಲು ಭಾರತದ ಈ ಬೃಹತ್ ರಕ್ಷಣಾ ಸಿದ್ಧತೆ ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !