ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಲಾಹೋರ್‌ನಲ್ಲಿ ಇಬ್ಬರು ವಿದೇಶಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಹೈಪ್ರೊಫೈಲ್ ಪ್ರಕರಣದಲ್ಲಿ ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ಆಪ್ತ ಸಂಬಂಧಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ವಿವರ ಮತ್ತು ಕೋರ್ಟ್ ಆದೇಶ
ಬಂಧಿತರನ್ನು ಮುಹಮ್ಮದ್ ರಜಾ ದಾರ್, ಹಸನ್ ರಜಾ, ಸಿಕಂದರ್ ಖಾನ್ ಮತ್ತು ಸಾಜಿದ್ ಅಲಿ ಎಂದು ಗುರುತಿಸಲಾಗಿದೆ. ಇವರಲ್ಲಿ ಪ್ರಮುಖ ಶಂಕಿತನಾಗಿರುವ ರಜಾ ದಾರ್, ಉಪಪ್ರಧಾನಿ ಇಶಾಕ್ ದಾರ್ ಅವರ ಹತ್ತಿರದ ಸಂಬಂಧಿಯಾಗಿದ್ದಾನೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಲಾಹೋರ್ ನ್ಯಾಯಾಲಯವು ಆರೋಪಿಗಳನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಐದನೇ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ತಲಾಶ್ ನಡೆಸಲಾಗುತ್ತಿದೆ.
ಪರಿಚಯವಾಗಿದ್ದು ಹೇಗೆ?
ಬಲಿಪಶುಗಳಾದ ಇಬ್ಬರು ಮಹಿಳೆಯರು ನೆದರ್‌ಲ್ಯಾಂಡ್ಸ್ ಮತ್ತು ವೆನೆಜುವೆಲಾ ದೇಶದ ಪ್ರಜೆಗಳಾಗಿದ್ದಾರೆ. 2025ರ ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ಈ ಮಹಿಳೆಯರಿಗೆ ರಜಾ ದಾರ್ ಪರಿಚಯವಾಗಿದ್ದ. ಇವರೆಲ್ಲರೂ ಕ್ರಿಪ್ಟೋಕರೆನ್ಸಿ ಉದ್ಯಮದಲ್ಲಿ ಪಾಲುದಾರರಾಗಿದ್ದರು ಎನ್ನಲಾಗಿದೆ. ಇದೇ ಸ್ನೇಹದ ಆಧಾರದ ಮೇಲೆ ಆರೋಪಿಯು ಮಹಿಳೆಯರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದನು.
ಅಪಹರಣ ಮತ್ತು ಅತ್ಯಾಚಾರ
ಜೂನ್ 29 ರಂದು ಲಾಹೋರ್‌ಗೆ ಬಂದಿಳಿದ ವಿದೇಶಿ ಮಹಿಳೆಯರನ್ನು ಐವರು ಪುರುಷರ ತಂಡ ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿದೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ. “ಉಪಪ್ರಧಾನಿ ಕುಟುಂಬದ ಸದಸ್ಯರೇ ಇದರಲ್ಲಿ ಭಾಗಿಯಾಗಿರುವುದರಿಂದ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



