ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವಿನ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ (ECI) ಅಧಿಕೃತವಾಗಿ ದೂರು ಸಲ್ಲಿಸಿದೆ.
ನಿಯಮಗಳ ಉಲ್ಲಂಘನೆ ಆರೋಪ:
ಚುನಾವಣಾ ಆಯೋಗದ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಮತದಾರರ ಪಟ್ಟಿ ಪರಿಷ್ಕರಣೆಯ ಫಾರ್ಮ್‌ಗಳನ್ನು ಬೃಹತ್ ಪ್ರಮಾಣದಲ್ಲಿ ನಿಯಮಬಾಹಿರವಾಗಿ ವಿತರಿಸಲಾಗುತ್ತಿದೆ ಎಂದು ಬಿಜೆಪಿ ದೂರಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಲಾಭಕ್ಕಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಸಿಬ್ಬಂದಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಮತ್ತು ರಾಮನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ನಕಲಿ ಅಥವಾ ಅನರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಬಿಜೆಪಿ ನಿಯೋಗ ಆಯೋಗದ ಗಮನಕ್ಕೆ ತಂದಿದೆ.
ಇದನ್ನೂ ಓದಿ:
ಮುಂದುವರಿದ ರಾಜಕೀಯ ವಾಗ್ವಾದ
ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ SIR ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ನಾಗರಿಕರಿಗೆ ಪ್ರೇರಣೆ ನೀಡಿದ್ದರು. ಆದರೆ, ಅದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ‘ಮಹಾ ದಂಧೆ’ಯ ಆರೋಪ ಮಾಡಿದ್ದ ಅವರು, ಈಗ ಈ ಹೋರಾಟವನ್ನು ನೇರವಾಗಿ ಚುನಾವಣಾ ಆಯೋಗದ ಮೆಟ್ಟಿಲಿಗೆ ಕೊಂಡೊಯ್ದಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ SIR ಪ್ರಕ್ರಿಯೆಯ ಸುತ್ತಲಿನ ರಾಜಕೀಯ ಇನ್ನು ಕಾವೇರಿದೆ.



