July 5, 2026
Sunday, July 5, 2026
spot_img

ಕುಂದಾನಗರಿಯಲ್ಲಿ ವರುಣನ ಆರ್ಭಟ: ಹುಣಸೆ ಮರ ಬಿದ್ದು 4 ಮನೆಗಳು ಜಖಂ, ಸಂತ್ರಸ್ತರ ಕಣ್ಣೀರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಮೂರ್ನಾಲ್ಕು ದಿನಗಳಿಂದ ಕುಂದಾನಗರಿ ಬೆಳಗಾವಿಯಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬಿರುಗಾಳಿಗೆ ಜನಜೀವನ ತಲ್ಲಣಗೊಂಡಿದೆ. ವರುಣನ ಆರ್ಭಟಕ್ಕೆ ನಗರದ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ಬೃಹತ್ ಹುಣಸೆ ಮರವೊಂದು ಧರೆಗುರುಳಿದ್ದು, ನಾಲ್ಕು ಮನೆಗಳಿಗೆ ತೀವ್ರ ಹಾನಿಯಾಗಿದೆ.

ನಿರಾಶ್ರಿತರಾದ ಬಡ ಕುಟುಂಬಗಳು

ಮರ ಬಿದ್ದ ರಭಸಕ್ಕೆ ಸ್ಥಳೀಯ ನಿವಾಸಿಗಳಾದ ಅನಿಲ್ ಮುಟ್ಟೇಕರ್, ಆನಂದ ಭದ್ವಾಂಕರ್, ಏಕನಾಥ ಭದ್ವಾಂಕರ್ ಮತ್ತು ಪ್ರಶಾಂತ ಗೋರ್ಲೆ ಎಂಬುವವರ ಮನೆಗಳು ಸಂಪೂರ್ಣ ಜಖಂಗೊಂಡಿವೆ. ಘಟನೆಯಿಂದಾಗಿ ಮನೆಯಲ್ಲಿದ್ದ ಅಗತ್ಯ ವಸ್ತುಗಳು ನಾಶವಾಗಿದ್ದು, ಬಡ ಕುಟುಂಬಗಳು ಆಸರೆಯಿಲ್ಲದೆ ಕಣ್ಣೀರಿಡುತ್ತಿವೆ. ತಮಗೆ ತಕ್ಷಣವೇ ಸರ್ಕಾರ ಹಾಗೂ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ಸಂತ್ರಸ್ತರು ಮನವಿ ಮಾಡಿದ್ದಾರೆ.

ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ಮರ ಬೀಳುವ ಮುನ್ಸೂಚನೆ ಸಿಗುತ್ತಿದ್ದಂತೆ ನಾಲ್ಕೂ ಕುಟುಂಬಗಳ ಸದಸ್ಯರು ತಕ್ಷಣವೇ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದರಿಂದಾಗಿ ಯಾವುದೇ ಜೀವಹಾನಿ ಸಂಭವಿಸದೆ ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ.

ಸ್ಥಳದಲ್ಲಿ ತೆರವು ಕಾರ್ಯಾಚರಣೆ ಚುರುಕು

ವಿಷಯ ತಿಳಿಯುತ್ತಿದ್ದಂತೆ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬೃಹತ್ ಮರವನ್ನು ಕತ್ತರಿಸಿ, ಸಂಚಾರ ಸುಗಮಗೊಳಿಸುವ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !