July 5, 2026
Sunday, July 5, 2026
spot_img

ಹಣ, ಮೊಬೈಲ್‌ಗಾಗಿ ಸ್ನೇಹಿತನನ್ನೇ ಸ್ಕ್ರೂ ಡ್ರೈವರ್‌ನಿಂದ ಚುಚ್ಚಿ ಕೊಂದ ಗೆಳೆಯ

ಹೊಸದಿಗಂತ ವಿಜಯಪುರ:

ಹಣ ಹಾಗೂ ಮೊಬೈಲ್ ಫೋನ್ ನೀಡುವಂತೆ ಸತತವಾಗಿ ಪೀಡಿಸುತ್ತಿದ್ದ ಸ್ನೇಹಿತನನ್ನೇ ಯುವಕನೊಬ್ಬ ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ವಿಜಯಪುರ ನಗರದ ಬೆಂಡಿಗೇರಿ ಗಲ್ಲಿಯಲ್ಲಿ ಜರುಗಿದೆ. ಇಲ್ಲಿನ ಸ್ಥಳೀಯ ನಿವಾಸಿ ಉಮರಸಾಬ್ ಪಟೇಲ್ (36) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ಹತ್ಯೆಗೆ ಕಾರಣವೇನು?

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ನಬೀರಸೂಲ್ ಹೊಟಗಿ ಮನೆಯಲ್ಲಿ ಇಬ್ಬರು ಸ್ನೇಹಿತರು ಒಟ್ಟಾಗಿ ಮದ್ಯದ ಪಾರ್ಟಿ ಆಯೋಜಿಸಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಉಮರಸಾಬ್, ತನಗೆ ತುರ್ತಾಗಿ ಹಣ ಹಾಗೂ ಮೊಬೈಲ್ ಕೊಡಿಸುವಂತೆ ನಬೀರಸೂಲ್ ಬಳಿ ಪಟ್ಟು ಹಿಡಿದಿದ್ದಾನೆ. ಇದರಿಂದ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಗಲಾಟೆ ವಿಕೋಪಕ್ಕೆ ತಿರುಗಿದಾಗ, ಕುಡಿದ ಅಮಲಿನಲ್ಲಿದ್ದ ನಬೀರಸೂಲ್ ಕೋಪಗೊಂಡು ಮನೆಯಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ಉಮರಸಾಬ್ ತಲೆ ಹಾಗೂ ಮುಖದ ಭಾಗಕ್ಕೆ ಬಲವಾಗಿ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ಉಮರಸಾಬ್ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಪೊಲೀಸರ ಭೇಟಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೋಳಗುಮ್ಮಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಸ್ಥಳೀಯವಾಗಿ ಭೀತಿ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !