ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ವಿನಾಶಕಾರಿ ಮಳೆಯಿಂದಾಗಿ ಮುಂಬೈ ಮತ್ತು ಪುಣೆ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಭಾರಿ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ಮತ್ತು ಹಳೇ ಹೆದ್ದಾರಿ ಎರಡರಲ್ಲೂ ವಾಹನ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಇತ್ತ ಕರ್ಜತ್-ಲೋನಾವಾಲಾ ಭೋರ್ ಘಾಟ್ ವಿಭಾಗದ ಠಾಕೂರ್‌ವಾಡಿ ಮತ್ತು ಖಂಡಾಲಾ-ಮಂಕಿ ಹಿಲ್ ನಡುವೆ ಸರಣಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಈ ಮಾರ್ಗದ ಮೂರೂ ರೈಲ್ವೆ ಲೈನ್‌ಗಳು ಹಾನಿಗೊಳಗಾಗಿದ್ದು, ರೈಲುಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮಾರ್ಗ ಬದಲಾವಣೆ ಮಾಡಲಾಗಿದೆ.
ಮುಂಬೈನಲ್ಲಿ ಕಟ್ಟಡ ಕುಸಿತ: ಆರು ಜನ ದುರ್ಮರಣ
ಧಾರಾಕಾರ ಮಳೆಯ ನಡುವೆಯೇ ಮುಂಬೈನ ಮಾಂಖುರ್ಡ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಭೀಕರ ದುರಂತ ಸಂಭವಿಸಿದೆ. ಇಲ್ಲಿನ ಮೂರು ಅಂತಸ್ತಿನ ಚಾಲ್ (ವಸತಿ ಗೃಹ) ಕುಸಿದು ಬಿದ್ದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಶಾಲೆ, ಕಾಲೇಜುಗಳಿಗೆ ತುರ್ತು ರಜೆ ಘೋಷಣೆ
ಪರಿಸ್ಥಿತಿ ಗಂಭೀರವಾಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈ, ಪುಣೆ, ಠಾಣೆ ಮತ್ತು ಪಾಲ್ಘರ್ ಜಿಲ್ಲೆಗಳ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆ ಮತ್ತು ಕಾಲೇಜುಗಳಿಗೆ ಸೋಮವಾರ ತುರ್ತು ರಜೆ ಘೋಷಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.



