ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಓಪನರ್ ಬೆತ್ ಮೂನಿ ಜಾಗತಿಕ ಕ್ರಿಕೆಟ್‌ನಲ್ಲಿ ಅಭೂತಪೂರ್ವ ದಾಖಲೆ ನಿರ್ಮಿಸಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಐತಿಹಾಸಿಕ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಮೂನಿ ಈ ಸಾಧನೆ ಮಾಡಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ಮೂನಿ ಅಬ್ಬರ
ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೆತ್ ಮೂನಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 49 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿಗಳ ನೆರವಿನಿಂದ 64 ರನ್ ಚಚ್ಚಿದರು. ಈ ಸ್ಫೋಟಕ ಅರ್ಧಶತಕದೊಂದಿಗೆ, ಪುರುಷರ ಮತ್ತು ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಟಿ20 ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಮೂರು ಬಾರಿ ಫಿಫ್ಟಿ ಬಾರಿಸಿದ ಜಗತ್ತಿನ ಏಕೈಕ ಕ್ರಿಕೆಟರ್ ಎಂಬ ಕೀರ್ತಿಗೆ ಮೂನಿ ಪಾತ್ರರಾಗಿದ್ದಾರೆ.
ಕೊಹ್ಲಿ ಹಿಂದಿಕ್ಕಿದ ಆಸೀಸ್ ತಾರೆ
ಇದಕ್ಕೂ ಮುನ್ನ ಈ ಅಪರೂಪದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ 77 ರನ್ ಹಾಗೂ 2024ರ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಗಳಿಸಿ, ಒಟ್ಟು 2 ಅರ್ಧಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರು.
ಮೂನಿ ಹ್ಯಾಟ್ರಿಕ್ ಸಾಧನೆ
ಬೆತ್ ಮೂನಿ ಈ ಹಿಂದೆ 2020ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ 78 ರನ್ ಮತ್ತು 2023ರ ಫೈನಲ್‌ನಲ್ಲಿ ಅಜೇಯ 74 ರನ್ ಸಿಡಿಸಿದ್ದರು. ಇದೀಗ 2026ರ ಫೈನಲ್‌ನಲ್ಲಿ 64 ರನ್ ಗಳಿಸುವ ಮೂಲಕ ಟಿ20 ವಿಶ್ವಕಪ್ ಇತಿಹಾಸದ ಫೈನಲ್ ಪಂದ್ಯಗಳಲ್ಲಿ ಸತತ ಮೂರು ಅರ್ಧಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಆಗಿ ಸುವರ್ಣಾಕ್ಷರಗಳಲ್ಲಿ ಹೆಸರು ಬರೆದಿದ್ದಾರೆ.



