July 6, 2026
Monday, July 6, 2026
spot_img

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ಹೊಸ ಸಾರಥಿ: ಚಂಪತ್ ರಾಯ್ ರಾಜೀನಾಮೆ ಸ್ವೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಮಹತ್ವದ ಆಡಳಿತಾತ್ಮಕ ಬೆಳವಣಿಗೆ ನಡೆದಿದ್ದು, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಅವರ ರಾಜೀನಾಮೆಯನ್ನು ಟ್ರಸ್ಟ್ ಸೋಮವಾರ ಅಧಿಕೃತವಾಗಿ ಅಂಗೀಕರಿಸಿದೆ. ಅವರ ಸ್ಥಾನಕ್ಕೆ ಬಜರಂಗ್ ಬಾಗ್ರಾ ಅವರನ್ನು ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ರಾಮಮಂದಿರ ಆವರಣದಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚೆಗೆ ದೇವಾಲಯಕ್ಕೆ ಭಕ್ತರು ನೀಡಿದ ದೇಣಿಗೆಯ ದುರ್ಬಳಕೆ ಆರೋಪದ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆ ಈ ಬದಲಾವಣೆ ನಡೆದಿದೆ. ಚಂಪತ್ ರಾಯ್ ಅವರು ಜೂನ್ 26ರಂದು ರಾಜೀನಾಮೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ದೇಣಿಗೆ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಚಾಲಕ ಸೇರಿದಂತೆ ಎಂಟು ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:

ಇದೇ ಪ್ರಕರಣದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ವಿರುದ್ಧ ಇದುವರೆಗೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ ಅಥವಾ ಅಧಿಕೃತ ಆರೋಪ ಹೊರಿಸಲಾಗಿಲ್ಲ.

ಸಭೆಗೆ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅಧ್ಯಕ್ಷತೆ ವಹಿಸಿದ್ದು, ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ, ಟ್ರಸ್ಟಿಗಳು, ಸರ್ಕಾರಿ ಪ್ರತಿನಿಧಿಗಳು ಹಾಗೂ ಕಾನೂನು ತಜ್ಞರು ಭಾಗವಹಿಸಿದ್ದರು. ಸಭೆಯಲ್ಲಿ ದೇಣಿಗೆ ನಿರ್ವಹಣೆಯ ಪಾರದರ್ಶಕತೆ, ಲೆಕ್ಕಪತ್ರ ವ್ಯವಸ್ಥೆ ಹಾಗೂ ಆಡಳಿತಾತ್ಮಕ ಸುಧಾರಣೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ತನಿಖೆ ಮುಂದುವರಿದಿರುವ ನಡುವೆ ಟ್ರಸ್ಟ್‌ನಲ್ಲಿ ನಡೆದ ಈ ನಾಯಕತ್ವ ಬದಲಾವಣೆ ಆಡಳಿತಾತ್ಮಕವಾಗಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !