ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮ ಮಂದಿರದಲ್ಲಿ ಸಂಗ್ರಹವಾಗಿರುವ ಕಾಣಿಕೆ ಹಣದ ಕುರಿತು ಉಂಟಾಗಿರುವ ಚರ್ಚೆಗಳ ನಡುವೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಮಾರ್ಚ್ 31 ರವರೆಗೆ ಒಟ್ಟು 582 ಕೋಟಿ ರೂ. ಕಾಣಿಕೆ ಹಣ ಬಂದಿದ್ದು ಅದರಲ್ಲಿ 391 ಕೋಟಿ ರೂಪಾಯಿಗಳನ್ನು ಮಂದಿರದ ನಿರ್ವಹಣಾ ವೆಚ್ಚಕ್ಕಾಗಿ ಬಳಸಲಾಗಿದೆ. ಉಳಿದ ಮೊತ್ತವು ಬ್ಯಾಂಕ್ ಖಾತೆಗಳಲ್ಲಿದೆ ಎಂದು ಟ್ರಸ್ಟ್ ತಿಳಿಸಿದೆ.
ಅಕ್ರಮ ಆರೋಪದ ಬಗ್ಗೆ ಚರ್ಚೆ
ಕಾಣಿಕೆ ಹಣದ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಟ್ರಸ್ಟ್ ಸಭೆ ನಡೆಸಿದೆ. ಸಭೆಯಲ್ಲಿ ಹಣಕಾಸಿನ ನಿರ್ವಹಣೆ, ತನಿಖೆಯ ಪ್ರಗತಿ, ಕೆಲವು ಆಡಳಿತಾತ್ಮಕ ಬದಲಾವಣೆಗಳು ಹಾಗೂ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಪ್ರಕರಣದ ಬಗ್ಗೆ ಟ್ರಸ್ಟಿಗಳು ವಿಷಾದ ವ್ಯಕ್ತಪಡಿಸಿದ್ದು, ಪಾರದರ್ಶಕ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:
ಪಾರದರ್ಶಕತೆಗೆ ಒತ್ತು
ಮಂದಿರ ನಿರ್ಮಾಣ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಾಜದ ಸಹಕಾರವನ್ನು ಟ್ರಸ್ಟ್ ಮೆಚ್ಚಿದ್ದು, ಉಳಿದ ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಸುರಕ್ಷಿತವಾಗಿ ಇಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಭಕ್ತರ ವಿಶ್ವಾಸ ಕಾಪಾಡಲು ಹಣಕಾಸಿನ ನಿರ್ವಹಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ಮತ್ತು ಮೇಲ್ವಿಚಾರಣೆಗೆ ಒತ್ತು ನೀಡಲಾಗುವುದು ಎಂದು ಟ್ರಸ್ಟ್ ಹೇಳಿದೆ.



