ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬಿಗ್ ಅನೌನ್ಸ್‌ಮೆಂಟ್ ಒಂದನ್ನು ಮಾಡಿದ್ದಾರೆ. ಭಾರತದ ಪ್ರತಿಷ್ಠಿತ ಬಿಜಿನೆಸ್ ಸ್ಕೂಲ್ ಆದ ‘ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು’ ಇನ್ಮುಂದೆ ವಿದೇಶದಲ್ಲೂ ತನ್ನ ಹೆಜ್ಜೆಗುರುತನ್ನು ಮೂಡಿಸಲಿದೆ.
ಇಂಡೋನೇಷ್ಯಾದಲ್ಲಿ ಐಐಎಂ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ಕ್ಯಾಂಪಸ್ ಅನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಕಾರ್ತಾದಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
ಪತ್ರಕಾಗೋಷ್ಠಿಯಲ್ಲಿ ಪ್ರಧಾನಿ ಮಾತನಾಡಿದ್ದು, ಈ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ. ಭಾರತದ ಐಐಎಂ ಸಂಸ್ಥೆಗಳ ಪೈಕಿ ವಿದೇಶದಲ್ಲಿ ಆರಂಭವಾಗುತ್ತಿರುವ ಎರಡನೇ ಕ್ಯಾಂಪಸ್ ಇದಾಗಿದೆ. ಇದಕ್ಕೂ ಮುನ್ನ ಐಐಎಂ ಅಹಮದಾಬಾದ್ ತನ್ನ ಕ್ಯಾಂಪಸ್ ಅನ್ನು ದುಬೈನಲ್ಲಿ ತೆರೆಯುವುದಾಗಿ ಘೋಷಿಸಿತ್ತು. ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ ಮದ್ರಾಸ್ (ಟಾಂಜಾನಿಯಾ) ಮತ್ತು ಐಐಟಿ ದೆಹಲಿ (ಅಬುಧಾಬಿ) ಈಗಾಗಲೇ ವಿದೇಶದಲ್ಲಿ ತಮ್ಮ ಶಾಖೆಗಳನ್ನು ತೆರೆದಿದ್ದು, ಈಗ ಈ ಸಾಲಿಗೆ ಐಐಎಂ ಬೆಂಗಳೂರು ಕೂಡ ಸೇರ್ಪಡೆಯಾಗಿದೆ.
ಈ ಹೊಸ ಐಐಎಂ ಬೆಂಗಳೂರು ಕ್ಯಾಂಪಸ್ ಇಂಡೋನೇಷ್ಯಾದ ಪೂರ್ವ ಜಾವಾದ ಮಲಾಂಗ್‌ನಲ್ಲಿರುವ ‘ಸಿಂಘಾಸರಿ ವಿಶೇಷ ಆರ್ಥಿಕ ವಲಯ’ದಲ್ಲಿ ತಲೆಯೆತ್ತಲಿದೆ. ಡಿಜಿಟಲ್ ಆರ್ಥಿಕತೆ, ನಾವೀನ್ಯತೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಮೀಸಲಾಗಿರುವ ಇಂಡೋನೇಷ್ಯಾದ ಮೊದಲ ವಿಶೇಷ ವಲಯ ಇದಾಗಿದೆ. ಈ ಕ್ಯಾಂಪಸ್‌ನಲ್ಲಿ ಮುಖ್ಯವಾಗಿ ಮ್ಯಾನೇಜ್‌ಮೆಂಟ್ , ಡಿಜಿಟಲ್ ಬಿಸಿನೆಸ್, ಕೃತಕ ಬುದ್ಧಿಮತ್ತೆ, ಉದ್ಯಮಶೀಲತೆ ಮತ್ತು ನಾಯಕತ್ವ ಅಭಿವೃದ್ಧಿಯ ಕುರಿತು ಜಾಗತಿಕ ಮಟ್ಟದ ಕೋರ್ಸ್‌ಗಳನ್ನು ನೀಡಲಾಗುತ್ತದೆ.



