November 11, 2026
Wednesday, November 11, 2026
spot_img

ನೋಯ್ಡಾ ಮೆಟ್ರೋ ಅಕ್ವಾ ಲೈನ್ ವಿಸ್ತರಣೆಗೆ ಕೇಂದ್ರ ಸಂಪುಟ ಅಂಗೀಕಾರ: 2,390 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿ ಮತ್ತು ನೋಯ್ಡಾ ಸುತ್ತಮುತ್ತಲಿನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ನೋಯ್ಡಾ ಸೆಕ್ಟರ್-51 ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್-04 ರವರೆಗಿನ ಮೆಟ್ರೋ ರೈಲು ಕಾರಿಡಾರ್ ವಿಸ್ತರಣೆ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಹಸಿರು ನಿಶಾನೆ ತೋರಿಸಿದೆ.

ಒಟ್ಟು 8.449 ಕಿಲೋ ಮೀಟರ್ ಉದ್ದದ ಈ ನೂತನ ಮಾರ್ಗವು 5 ಮೇಲ್ಸೇತುವೆ ನಿಲ್ದಾಣಗಳನ್ನು ಒಳಗೊಂಡಿರಲಿದ್ದು, ಇದರ ಒಟ್ಟು ವೆಚ್ಚ 2,390 ಕೋಟಿ ರೂ.ಎಂದು ಅಂದಾಜಿಸಲಾಗಿದೆ. ಈ ಹೊಸ ಮಾರ್ಗವು ಕಾರ್ಯಾರಂಭ ಮಾಡಿದರೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ನಗರಗಳ ಒಟ್ಟು ಸಕ್ರಿಯ ಮೆಟ್ರೋ ಜಾಲವು 71.878 ಕಿಲೋ ಮೀಟರ್‌ಗೆ ವಿಸ್ತರಣೆಯಾಗಲಿದೆ.

ಉದ್ಯೋಗಿಗಳಿಗೆ ಸಿಗಲಿದೆ ಬಿಗ್ ರಿಲೀಫ್

ಹೊಸ ಮಾರ್ಗ ಹಾದುಹೋಗುವ ಭಾಗದಲ್ಲಿ ಪ್ರಮುಖ ಐಟಿ ಕಂಪನಿಗಳು ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳು ನೆಲೆಗೊಂಡಿದ್ದು, ಅಲ್ಲಿನ ಸಾವಿರಾರು ಉದ್ಯೋಗಿಗಳಿಗೆ ಇದು ನೇರ ಸಂಪರ್ಕ ಕಲ್ಪಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಇದರ ಜೊತೆಗೆ ಅಕ್ವಾ ಲೈನ್‌ನ ಈ ವಿಸ್ತರಣೆಯು ದೆಹಲಿ ಪ್ರಾಂತ್ಯದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಗಳನ್ನು ಸುಲಭವಾಗಿ ತಲುಪಲು ದಾರಿ ಮಾಡಿಕೊಡುತ್ತದೆ. ಮೆಟ್ರೋ ವಿಸ್ತರಣೆ ಆಗಲಿರುವ ಈ ಜಾಗದಲ್ಲಿ ಬೃಹತ್ ರೈಲ್ವೆ ಟರ್ಮಿನಲ್ ಒಳಗೊಂಡ ಮಲ್ಟಿಮೋಡಲ್ ಸಾರಿಗೆ ಹಬ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಪ್ರಮುಖ ಮಾಲ್‌ಗಳು, ಆಸ್ಪತ್ರೆಗಳಿಗೆ ಸಂಪರ್ಕ

ಈ ಹೊಸ ಹಂತದ ಯೋಜನೆಯು ನೋಯ್ಡಾದ ಪ್ರಮುಖ ವಾಣಿಜ್ಯ ಮತ್ತು ವಸತಿ ವಲಯಗಳನ್ನು ಒಂದೇ ಸೂರಿನಡಿ ಜೋಡಿಸಲಿದೆ. ಗೌರ್ ಸಿಟಿ ಮಾಲ್, ಬ್ಲೂ ಸಫೈರ್ ಮಾಲ್, ಐಕಿಯಾ (ಮತ್ತು ಅಂಥೂರಿಯಂ ಮಾಲ್‌ನಂತಹ ಬೃಹತ್ ವ್ಯಾಪಾರ ಕೇಂದ್ರಗಳಿಗೆ ಇದು ಸುಲಭ ಸಂಪರ್ಕ ಒದಗಿಸಲಿದೆ.

ಅಷ್ಟೇ ಅಲ್ಲದೆ ಟೆಕ್ ಮಹೀಂದ್ರಾ, ಟಿಸಿಎಲ್ ಟೆಕ್‌ನಂತಹ ಐಟಿ ಹಬ್‌ಗಳು, ದೆಹಲಿ ಪಬ್ಲಿಕ್ ಸ್ಕೂಲ್ ಹಾಗೂ ಕೈಲಾಶ್ ಆಸ್ಪತ್ರೆ, ರಾಮಾ ಆಸ್ಪತ್ರೆಗಳಂತಹ ತುರ್ತು ಆರೋಗ್ಯ ಕೇಂದ್ರಗಳಿಗೂ ಈ ಮೆಟ್ರೋ ನೆರವಾಗಲಿದೆ. ಅತ್ಯಂತ ಹೆಚ್ಚಿನ ಬೇಡಿಕೆಯಿರುವ ನೋಯ್ಡಾ ಸೆಕ್ಟರ್-61 ರ ಬ್ಲೂ ಲೈನ್‌ಗೆ ಇದು ನೇರ ಇಂಟರ್‌ಚೇಂಜ್ ಸಂಪರ್ಕ ಒದಗಿಸಲಿದೆ.

ಇದನ್ನೂ ಓದಿ:

ಮಾಲಿನ್ಯ ಮುಕ್ತ ನಗರ ಸಂಚಾರ

ರಸ್ತೆ ಸಾರಿಗೆಗೆ ಅತ್ಯುತ್ತಮ ಪರ್ಯಾಯವಾಗಿರುವ ಈ ಮೆಟ್ರೋ ಕಾರಿಡಾರ್ ವಿಸ್ತರಣೆಯಿಂದಾಗಿ ನೋಯ್ಡಾ ರಸ್ತೆಗಳಲ್ಲಿ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಇದು ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಇಂಧನ ಆಧಾರಿತ ವಾಹನಗಳ ಬಳಕೆ ತಗ್ಗುವುದರಿಂದ ಪರಿಸರದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆಯಾಗಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ. ವಿಭಿನ್ನ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳ ಜನರಿಗೆ ಸಮಾನ ಸಾರಿಗೆ ಸೌಲಭ್ಯ ಕಲ್ಪಿಸುವ ಮೂಲಕ ಈ ಯೋಜನೆಯು ನಗರದ ಸುಸ್ಥಿರ ಬೆಳವಣಿಗೆಗೆ ಮುನ್ನುಡಿ ಬರೆಯಲಿದೆ.

Must Read

Skip to toolbar