ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶವನ್ನೇ ನಡುಗಿಸಿದ್ದ 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ಅತ್ಯಂತ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಎಲ್ಲಾ 38 ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಒಮ್ಮತದಿಂದ ಎತ್ತಿಹಿಡಿದಿದೆ. ಇದರೊಂದಿಗೆ ಪ್ರಕರಣದಲ್ಲಿದ್ದ ಇತರ 11 ಭಯೋತ್ಪಾದಕರ ಜೀವಾವಧಿ ಶಿಕ್ಷೆಯನ್ನು ಸಹ ನ್ಯಾಯಾಲಯ ಕಾಯ್ದುಕೊಂಡಿದೆ. ಇದೇ ವೇಳೆ, ಸ್ಫೋಟದಲ್ಲಿ ಮೃತರಾದ 56 ಜನರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಹಾಗೂ ಗಾಯಗೊಂಡ 200ಕ್ಕೂ ಹೆಚ್ಚು ಸಂತ್ರಸ್ತರಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆಯೂ ಹೈಕೋರ್ಟ್ ಆದೇಶಿಸಿದೆ.
ಏನಿದು ಘಟನೆ:
ಜುಲೈ 26, 2008 ರಂದು ಗುಜರಾತ್ನ ಅಹಮದಾಬಾದ್ನಾದ್ಯಂತ ಕೇವಲ 70 ನಿಮಿಷಗಳ ಅವಧಿಯಲ್ಲಿ 20 ವಿವಿಧ ಸ್ಥಳಗಳಲ್ಲಿ ಬರೋಬ್ಬರಿ 21 ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಇಡೀ ನಗರವನ್ನು ಭೀತಿಯಲ್ಲಿ ಮುಳುಗಿಸಿದ್ದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ 56 ಅಮಾಯಕರು ಜೀವ ಕಳೆದುಕೊಂಡಿದ್ದರು ಮತ್ತು 200 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ‘ಹರ್ಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ’ ಎಂಬ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು.



